Sunday, 15th December 2024

Bishnoi Gang: ದಾವೂದ್ ಇಬ್ರಾಹಿಂ ಹಾದಿಯಲ್ಲಿ ಬಿಷ್ಣೋಯ್‌ ಗ್ಯಾಂಗ್! ಇವರ ಗ್ಯಾಂಗ್‌ನಲ್ಲಿ 700 ಶೂಟರ್‌ಗಳು!

Bishnoi Gang

ಪಂಜಾಬಿ ಗಾಯಕ ಸಿಧು ಮೂಸೆವಾಲಾ (Singer Sidhu Moosewala), ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ (Baba Siddiqui) ಹತ್ಯೆ ಸೇರಿದಂತೆ ಹಲವು ಪ್ರಕರಣಗಳ ಹೊಣೆ ಹೊತ್ತುಕೊಂಡಿರುವ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಗ್ಯಾಂಗ್‌ (Bishnoi Gang) ವಿಶ್ವಾದ್ಯಂತ 700 ಶೂಟರ್‌ಗಳೊಂದಿಗೆ ಕಾರ್ಯಾಚರಣೆ ನಡೆಸುತ್ತಿದೆ. ಈ ಗ್ಯಾಂಗ್ ದಾವೂದ್ ಇಬ್ರಾಹಿಂ (Dawood Ibrahim) ಹಾದಿಯನ್ನು ಅನುಸರಿಸುತ್ತಿದೆ ಎಂಬುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಹೇಳಿದೆ.

ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಸೇರಿದಂತೆ 16 ಮಂದಿಯ ವಿರುದ್ಧ ಎನ್‌ಐಎ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಅನ್ನು ದಾವೂದ್ ಇಬ್ರಾಹಿಂನ ಡಿ- ಕಂಪನಿಗೆ ಹೋಲಿಸಿದೆ. 90ರ ದಶಕದಲ್ಲಿ ದಾವೂದ್ ಇಬ್ರಾಹಿಂ ಸಣ್ಣ ಅಪರಾಧಗಳನ್ನು ಮಾಡಿ ಅಪರಾಧ ಜಗತ್ತಿಗೆ ಕಾಲಿಟ್ಟು ತನ್ನ ಜಾಲವನ್ನು ಹೇಗೆ ವಿಸ್ತರಿಸಿದನೋ ಅದೇ ರೀತಿ ಲಾರೆನ್ಸ್ ಬಿಷ್ಣೋಯ್ ಕೂಡ ತನ್ನ ಜಾಲವನ್ನು ವಿಸ್ತರಿಸಿಕೊಂಡಿದ್ದಾನೆ ಎಂಬುದಾಗಿ ಚಾರ್ಜ್‌ಶೀಟ್ ನಲ್ಲಿ ಎನ್‌ಐಎ ಹೇಳಿದೆ.

ಮಾದಕ ವಸ್ತುಗಳ ಕಳ್ಳ ಸಾಗಣೆ, ಹತ್ಯೆಗಳು, ಸುಲಿಗೆ ದಂಧೆಗಳ ಮೂಲಕ ದಾವೂದ್ ಇಬ್ರಾಹಿಂ ತನ್ನ ಜಾಲವನ್ನು ವಿಸ್ತರಿಸಿದ್ದು, ಅನಂತರ ಪಾಕಿಸ್ತಾನಿ ಭಯೋತ್ಪಾದಕರೊಂದಿಗೆ ಸೇರಿಕೊಂಡು ಡಿ- ಕಂಪನಿಯನ್ನು ರಚಿಸಿದ್ದ.
ಬಿಷ್ಣೋಯ್ ಗ್ಯಾಂಗ್ ಕೂಡ ಆರಂಭದಲ್ಲಿ ಸಣ್ಣ ಅಪರಾಧಗಳನ್ನು ನಡೆಸಿ ತನ್ನದೇ ಗ್ಯಾಂಗ್ ಕಟ್ಟಿಕೊಂಡಿದೆ. ಈಗ ಅದು ಉತ್ತರ ಭಾರತದಲ್ಲಿ ಹೆಚ್ಚು ಪ್ರಾಬಲ್ಯತೆ ಪಡೆದಿದೆ.

Bishnoi Gang

700ಕ್ಕೂ ಹೆಚ್ಚು ಶೂಟರ್‌ಗಳು

ಸತ್ವಿಂದರ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ನಿರ್ವಹಿಸುತ್ತಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಲ್ಲಿ 700ಕ್ಕೂ ಹೆಚ್ಚು ಶೂಟರ್‌ಗಳಿದ್ದಾರೆ. ಇದರಲ್ಲಿ 300 ಮಂದಿ ಪಂಜಾಬ್ ನೊಂದಿಗೆ ಸಂಪರ್ಕ ಹೊಂದಿದ್ದಾರೆ. ವಿವಿಧ ಅಪರಾಧ ಪ್ರಕರಣಕ್ಕೆ ಸಂಬಂಧಿಸಿ ಕೆನಡಾ ಪೊಲೀಸರು ಮತ್ತು ಭಾರತೀಯ ಏಜೆನ್ಸಿಗಳಿಗೆ ಬೇಕಾಗಿರುವ ವ್ಯಕ್ತಿಯಾಗಿದ್ದಾನೆ ಗೋಲ್ಡಿ ಬ್ರಾರ್ ಎಂದು ಎನ್‌ಐಎ ಚಾರ್ಜ್‌ಶೀಟ್ ಬಹಿರಂಗಪಡಿಸಿದೆ.

ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಅವರ ಫೋಟೋಗಳನ್ನು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. 2020- 21ರ ವೇಳೆಗೆ ಬಿಷ್ಣೋಯ್ ಗ್ಯಾಂಗ್ ಸುಲಿಗೆ ಮೂಲಕ ಕೋಟ್ಯಂತರ ರೂಪಾಯಿ ಗಳಿಸಿತ್ತು ಮತ್ತು ಆ ಹಣವನ್ನು ಹವಾಲಾ ಮಾರ್ಗಗಳ ಮೂಲಕ ವಿದೇಶಕ್ಕೆ ಕಳುಹಿಸಲಾಗಿತ್ತು ಎನ್ನಲಾಗಿದೆ.

ಗ್ಯಾಂಗ್ ಕಾರ್ಯಾಚರಣೆ ಹೇಗೆ?

ಎನ್‌ಐಎ ಪ್ರಕಾರ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಒಂದು ಕಾಲದಲ್ಲಿ ಪಂಜಾಬ್‌ಗೆ ಸೀಮಿತವಾಗಿತ್ತು. ಗೋಲ್ಡಿ ಬ್ರಾರ್ ಸಹಾಯದಿಂದ ಹರಿಯಾಣ, ದೆಹಲಿ ಮತ್ತು ರಾಜಸ್ಥಾನದ ಗ್ಯಾಂಗ್‌ಗಳೊಂದಿಗೆ ಬಿಷ್ಣೋಯ್ ಗ್ಯಾಂಗ್ ಮೈತ್ರಿ ಮಾಡಿಕೊಂಡು ತನ್ನ ಜಾಲವನ್ನು ವಿಸ್ತರಿಸಿದೆ. ಪ್ರಸ್ತುತ ಬಿಷ್ಣೋಯ್ ಗ್ಯಾಂಗ್ ಪಂಜಾಬ್, ಉತ್ತರ ಪ್ರದೇಶ, ಹರಿಯಾಣ, ಮಹಾರಾಷ್ಟ್ರ, ದೆಹಲಿ, ರಾಜಸ್ಥಾನ, ಜಾರ್ಖಂಡ್ ಸೇರಿದಂತೆ ಉತ್ತರ ಭಾರತದಾದ್ಯಂತ ವ್ಯಾಪಿಸಿದೆ. ಯುವಕರನ್ನು ತಮ್ಮ ಗ್ಯಾಂಗ್‌ಗೆ ಸೇರಿಸಿಕೊಳ್ಳಲು ಸಾಮಾಜಿಕ ಮಾಧ್ಯಮ ಸೇರಿದಂತೆ ಹಲವು ಮಾರ್ಗಗಳನ್ನು ಈ ತಂಡ ಬಳಸಿಕೊಳ್ಳುತ್ತಿದೆ.

Lawrence Bishnoi: ಲಾರೆನ್ಸ್ ಬಿಷ್ಣೋಯ್; ಈತ ದೇಶದ ಮೋಸ್ಟ್‌ ಡೇಂಜರಸ್‌ ಕ್ರಿಮಿನಲ್‌! ಜೈಲೇ ಈತನ ಹೆಡ್‌ ಕ್ವಾರ್ಟರ್‌!

ಯುವಕರನ್ನು ಆಕರ್ಷಿಸುವುದು ಹೇಗೆ?

ವಿದೇಶಕ್ಕೆ ತೆರಳುವ ಕನಸು ಕಾಣುವ ಯುವಕರನ್ನು ಬಿಷ್ಣೋಯ್ ಗ್ಯಾಂಗ್ ತನ್ನ ತೆಕ್ಕೆಗೆ ಸೇರಿಸಿಕೊಳ್ಳುತ್ತದೆ. ಕೆನಡಾ ಅಥವಾ ಅವರ ಆಯ್ಕೆಯ ದೇಶಕ್ಕೆ ಕಳುಹಿಸುವುದಾಗಿ ಭರವಸೆ ನೀಡಿ ಯುವಕರನ್ನು ಗ್ಯಾಂಗ್ ನ ಚಟುವಟಿಕೆಯಲ್ಲಿ ಭಾಗಿಯಾಗುವಂತೆ ಮಾಡಲಾಗುತ್ತದೆ. ಪಾಕಿಸ್ತಾನ ಮೂಲದ ಖಲಿಸ್ತಾನಿ ಭಯೋತ್ಪಾದಕ ಹರ್ವಿಂದರ್ ಸಿಂಗ್ ಸೇರಿದಂತೆ ಪಂಜಾಬ್‌ನಲ್ಲಿ ನಡೆದ ಹತ್ಯೆ ಮತ್ತು ಅಪರಾಧ ಚಟುವಟಿಕೆಗಳನ್ನು ನಡೆಸಲು ಬಿಷ್ಣೋಯ್‌ ಶೂಟರ್‌ಗಳನ್ನು ಬಳಸಿದ್ದಾನೆ ಎಂದು ಎನ್‌ಐಎ ಹೇಳಿದೆ.