ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭೆ (68 ಸದಸ್ಯ ಬಲ)ಗೆ ನ.12 ರಂದು ಚುನಾವಣೆ ನಡೆಯಲಿದ್ದು, ಭಾರತೀಯ ಜನತಾ ಪಕ್ಷ (ಬಿಜೆಪಿ) ಭಾನುವಾರ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ಪ್ರಣಾಳಿಕೆ ಕರಡು ರಚನೆಗೆ ಸಾರ್ವಜನಿಕರಿಂದ ಸಲಹೆಗಳನ್ನು ಪಡೆಯಲು ಪಕ್ಷವು ಸಮಿತಿಯನ್ನು ರಚಿಸಿತ್ತು.
11 ಬದ್ಧತೆಗಳ ಕುರಿತು ಸಂಕಲ್ಪ ಪತ್ರವನ್ನು ಬಿಡುಗಡೆಗೊಳಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ‘ಈ ಬದ್ಧತೆಗಳು ಸಮಾಜದಲ್ಲಿ ಏಕರೂಪತೆಯನ್ನು ತರುತ್ತವೆ. ಯುವಕರು ಮತ್ತು ರೈತರನ್ನು ಸಬಲಗೊಳಿಸುತ್ತವೆ, ತೋಟಗಾರಿಕೆಯನ್ನು ಬಲಪಡಿಸು ತ್ತವೆ. ಸರ್ಕಾರಿ ನೌಕರರಿಗೆ ನ್ಯಾಯವನ್ನು ನೀಡುತ್ತವೆ ಮತ್ತು ಧಾರ್ಮಿಕ ಪ್ರವಾಸೋ ದ್ಯಮವನ್ನು ಮುನ್ನಡೆಸುತ್ತವೆ ಎಂದು ಹೇಳಿದರು.
ಬಿಜೆಪಿ ಸರ್ಕಾರವು ರಾಜ್ಯಕ್ಕೆ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ತರಲಿದೆ. ಈ ಉದ್ದೇಶಕ್ಕಾಗಿ ತಜ್ಞರ ಸಮಿತಿಯನ್ನು ರಚಿಸಲಾಗುವುದು ಮತ್ತು ಅವರ ವರದಿಯ ಆಧಾರದ ಮೇಲೆ ರಾಜ್ಯದಲ್ಲಿ ಯುಸಿಸಿ ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಬಿಜೆಪಿ ಸರ್ಕಾರವು ಹಂತ ಹಂತವಾಗಿ 8 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಒದಗಿಸಲಿದೆ. ಇದು ಸರ್ಕಾರಿ ಉದ್ಯೋಗ ಗಳು ಮತ್ತು ಆರ್ಥಿಕ ವಲಯದಲ್ಲಿ ನಡೆಯುತ್ತಿರುವ ಕೆಲಸಗಳನ್ನು ಒಳಗೊಂಡಿರುತ್ತದೆ ಎಂದರು.
ಬಿಜೆಪಿ ಸರ್ಕಾರ ‘ಶಕ್ತಿ’ ಕಾರ್ಯಕ್ರಮವನ್ನು ಪ್ರಾರಂಭಿಸಲಿದ್ದು, ಇದರ ಅಡಿಯಲ್ಲಿ ಧಾರ್ಮಿಕ ಸ್ಥಳಗಳು ಮತ್ತು ದೇವಾಲಯಗಳ ಸುತ್ತ ಮೂಲಸೌಕರ್ಯ ಮತ್ತು ಸಾರಿಗೆಯನ್ನು ಅಭಿವೃದ್ಧಿಪಡಿಸಲು 10 ವರ್ಷಗಳ ಅವಧಿಯಲ್ಲಿ ₹ 12,000 ಕೋಟಿ ವ್ಯಯಿಸ ಲಾಗುವುದು. ಅವುಗಳನ್ನು ‘ಹಿಮ್ತೀರ್ಥ’ ಸರ್ಕ್ಯೂಟ್ಗೆ ಸಂಪರ್ಕಿಸಲಾಗುತ್ತದೆ ಎಂದು ಹೇಳಿದರು.