ಬೆಂಗಳೂರು : ಜಮ್ಮು ಮತ್ತು ಕಾಶ್ಮೀರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ (J&K assembly election) ಬಿಜೆಪಿ ತನ್ನ ಪ್ರಣಾಳಿಕೆಯನ್ನು ಪ್ರಕಟಿಸಿದೆ. ಗೃಹ ಸಚಿವ ಅಮಿತ್ ಶಾ ಪ್ರಣಾಳಿಕೆ ಕುರಿತು ಮಾತನಾಡಿ, ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ನೇ ವಿಧಿಯನ್ನು ಪುನಃಸ್ಥಾಪಿಸಲು ಸಾಧ್ಯವೇ ಇಲ್ಲ. ಅದೀಗ ಇತಿಹಾಸವಷ್ಟೇ ಎಂದು ಹೇಳಿದರು. 2019 ರಲ್ಲಿ ರದ್ದು ಮಾಡಲಾಗಿರುವ 370 ನೇ ವಿಧಿಯನ್ನು ಪುನಃಸ್ಥಾಪಿಸುವ ಭರವಸೆಯನ್ನು ನ್ಯಾಷನಲ್ ಕಾನ್ಫರೆನ್ಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಅಮಿತ್ ಶಾ ಹೇಳಿಕೆ ವಿಶೇಷ ಎನಿಸಿದೆ. 2014 ರ ನಂತರ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ನಡೆಯಲಿದ್ದು 370ನೇ ವಿಧಿ ವಾಪಸಾದ ಬಳಿಕ ಜನರ ಪ್ರತಿಕ್ರಿಯೆ ಏನೆಂಬುದನ್ನು ತಿಳಿಯಲು ಇದು ಸೂಕ್ತ ಸಮಯವಾಗಿದೆ.
#WATCH | On BJP's manifesto having a rehabilitation scheme for Kashmiri Pandits, Union Home Minister Amit Shah says, "…The scheme will be very detailed. We will look for complete rehabilitation. Many Kashmiri Pandits and people from the Sikh community who left when the… pic.twitter.com/uYpnEuqkWu
— ANI (@ANI) September 6, 2024
ಅಮಿತ್ ಶಾ ಭರವಸೆ ಏನು?
ಜಮ್ಮು ಮತ್ತು ಕಾಶ್ಮೀರದ ರಾಜೌರಿ ಬಳಿ ಹೊಸ ಪ್ರವಾಸಿ ಕೇಂದ್ರ ಬರಲಿದೆ ಮತ್ತು ಕಣಿವೆಯಲ್ಲಿ 5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಹೇಳಿದರು. ಜಮ್ಮುವಿನಲ್ಲಿ ಪ್ರವಾಸಿ ಕೇಂದ್ರಗಳನ್ನು ಸಹ ರಚಿಸಲಾಗುವುದು ಮತ್ತು ಕಾಶ್ಮೀರಿ ಪಂಡಿತರು ಸೇರಿದಂತೆ ಸ್ಥಳಾಂತರಗೊಂಡ ಸಮುದಾಯಗಳ ಕಲ್ಯಾಣವನ್ನು ಬಿಜೆಪಿ ಖಚಿತಪಡಿಸಲಿದೆ ಎಂದರು.
“ಕಾಶ್ಮೀರಿ ಪಂಡಿತ ಸಮುದಾಯದ ಸುರಕ್ಷಿತ ಮರಳುವಿಕೆ ಮತ್ತು ಪುನರ್ವಸತಿ ಖಚಿತಪಡಿಸಿಕೊಳ್ಳಲು ನಾವು ಟಿಕಾ ಲಾಲ್ ತಪ್ಲೂ ವಿಸ್ತಾಪಿತ್ ಸಮಾಜ ಪುರನ್ವಾಸ್ ಯೋಜನೆ (ಟಿಎಲ್‌ಟಿವಿಪಿವೈ) ಅನ್ನು ಪ್ರಾರಂಭಿಸುತ್ತೇವೆ,” ಎಂದು ಅವರು ಹೇಳಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಬಿಜೆಪಿ ಗುರಿ,” ಎಂದು ಅಮಿತ್ ಶಾ ಹೇಳಿದರು.
ಕೇಂದ್ರಾಡಳಿತ ಪ್ರದೇಶವು 10 ವರ್ಷಗಳಲ್ಲಿ “ಗರಿಷ್ಠ ಭಯೋತ್ಪಾದನೆಯಿಂದ ಗರಿಷ್ಠ ಪ್ರವಾಸೋದ್ಯಮದ” ತಾಣವಾಗಿ ಬದಲಾಗಿದೆ ಎಂದು ಹೇಳಿದರು. ಕಾಶ್ಮೀರ ಕಣಿವೆಯಲ್ಲಿ ಬಿಜೆಪಿಯ ಕಾರ್ಯವನ್ನು ಶ್ಲಾಘಿಸಿದ ಶಾ, ಪಕ್ಷವು ಭಯೋತ್ಪಾದಕ ಪರಿಸರ ವ್ಯವಸ್ಥೆಯನ್ನು ನಾಶಪಡಿಸಿದೆ ಎಂದು ಹೇಳಿದರು.
ಜಮ್ಮು ನಮ್ಮ ಹೃದಯಕ್ಕೆ ಹತ್ತಿರವಾಗಿದೆ: ಅಮಿತ್ ಶಾ
ಜಮ್ಮು ಮತ್ತು ಕಾಶ್ಮೀರವು 1947 ರಿಂದಲೂ ನಮ್ಮ ಹೃದಯಕ್ಕೆ ಬಹಳ ಹತ್ತಿರವಾಗಿದೆ. ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿತ್ತು ಮತ್ತು ಯಾವಾಗಲೂ ಉಳಿಯುತ್ತದೆ” ಎಂದು ಶಾ ಹೇಳಿದರು. ಕಣಿವೆಯಲ್ಲಿ ಶಾಂತಿ ಪುನಃಸ್ಥಾಪಿಸುವುದೇ ಬಿಜೆಪಿಯ ಗಮನವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Nikhil Kumaraswamy: ಚನ್ನಪಟ್ಟಣ ಟಿಕೆಟ್ ಯಾರಿಗೆ? ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?
ನ್ಯಾಷನಲ್ ಕಾನ್ಫರೆನ್ಸ್ ಬಿಡುಗಡೆ ಮಾಡಿದ ಚುನಾವಣಾ ಪ್ರಣಾಳಿಕೆಯ ಮೇಲೆ ದಾಳಿ ನಡೆಸಿದ ಶಾ “ರಾಜಕೀಯ ಪಕ್ಷವು ಈ ರೀತಿಯ ಪ್ರಣಾಳಿಕೆಯನ್ನು ಹೇಗೆ ಬಿಡುಗಡೆ ಮಾಡಲು ಸಾಧ್ಯ ಎಂದು ನನಗೆ ಆಶ್ಚರ್ಯ. ಕಾಂಗ್ರೆಸ್‌ನಂಥ ರಾಷ್ಟ್ರೀಯ ಪಕ್ಷವು ಅದನ್ನು ಬೇಷರತ್ತಾಗಿ ಹೇಗೆ ಬೆಂಬಲಿಸಿತು? ಕಾಂಗ್ರೆಸ್ ನ್ಯಾಷನಲ್ ಕಾನ್ಫರೆನ್ಸ್ ಪ್ರಣಾಳಿಕೆಯನ್ನು ಬೆಂಬಲಿಸುತ್ತಾರೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ನಾನು ರಾಹುಲ್ ಗಾಂಧಿಗೆ ಆಗ್ರಹಿಸುತ್ತೇನೆ ” ಎಂದು ಅವರು ಹೇಳಿದರು.
ಎರಡು ದಿನಗಳ ಭೇಟಿಗಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿರುವ ಅಮಿತ್ ಶಾ, ಸ್ವಾತಂತ್ರ್ಯದ ನಂತರ ಜಮ್ಮು ಮತ್ತು ಕಾಶ್ಮೀರವು ಬಿಜೆಪಿಗೆ ಬಹಳ ಮುಖ್ಯ ಎಂಬುದನ್ನು ವಿವರಿಸಿದ್ದಾರೆ 2014ರವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದ ಮತ್ತು ಭಯೋತ್ಪಾದನೆಯ ಛಾಯೆ ಆವರಿಸಿತ್ತು. ಹಲವರು ವ್ಯವಸ್ಥೆಯನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿದ್ದರು. ಸರ್ಕಾರಗಳು ತುಷ್ಟೀಕರಣ ನೀತಿ ಅಳವಡಿಸಿಕೊಂಡಿದ್ದವು. 2014 ಮತ್ತು 2024 ರ ನಡುವಿನ ವರ್ಷಗಳು ಜಮ್ಮು ಮತ್ತು ಕಾಶ್ಮೀರದ ಪಾಲಿಗೆ ಸುವರ್ಣಾಕ್ಷರಗಳಲ್ಲಿ ಬರೆದಿಡುವ ಕಾಲ ಎಂದು ಹೇಳಿದರು.