ಮುಂಬೈ : ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ಭಾರತೀಯ ಜನತಾ ಪಕ್ಷ ಸೋಮವಾರ ಆಗ್ರಹಿಸಿದೆ.
ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ ಸಿಪಿ) ಹೇಳಿಕೆ ನೀಡಿದ ಮರುದಿನವೇ ಈ ಬೇಡಿಕೆ ಬಂದಿದೆ.
ಮುಂಬೈಯ ಬಾರ್ ಮತ್ತು ಹೋಟೆಲ್ ಗಳಿಂದ ಮಾಸಿಕ 100 ಕೋಟಿ ರೂಪಾಯಿಗಳನ್ನು ವಸೂಲಿ ಮಾಡಲು ಪೊಲೀಸ್ ಅಧಿಕಾರಿಗಳಿಗೆ ಅನಿಲ್ ದೇಶ್ ಮುಖ ಸೂಚಿಸಿದ್ದರು ಎಂದು ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರು ಪತ್ರದಲ್ಲಿ ಬರೆದಿದ್ದರು. ಈ ಗಂಭೀರ ವಿಷಯದ ಬಗ್ಗೆ ಚರ್ಚೆ ನಡೆದ ಬಳಿಕ ಎನ್ ಸಿಪಿ ನಾಯಕ ಅನಿಲ್ ದೇಶ್ ಮುಖ್ ಅವರು ಮಹಾರಾಷ್ಟ್ರ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ನಾಯಕರು ಒತ್ತಾಯಿಸಿದ್ದರು.
ಇದೀಗ ಎಲ್ಲಾ ಪಕ್ಷದ ನಾಯಕರು ಜೊತೆಯಾಗಿ ಕುಳಿತು ಮಾತುಕತೆ ನಡೆಸಿದ ಬಳಿಕ ದೇಶ್ ಮುಖ್ ರಾಜಿನಾಮೆ ನೀಡುವುದಿಲ್ಲ ಎಂದು ಎನ್ ಸಿಪಿ ಹೇಳಿಕೆ ನೀಡೀದ್ದರಿಂದ, ಇದೀಗ ಬಿಜೆಪಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಆಗ್ರಹಿಸಿದೆ.