Friday, 22nd November 2024

BJP V/S Congress: ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆ ವೇಳೆ ಮಲ್ಲಿಕಾರ್ಜುನ ಖರ್ಗೆಗೆ ಕಾಂಗ್ರೆಸ್‌ನಿಂದ ಅವಮಾನ; ಬಿಜೆಪಿ ಟೀಕೆ

ತಿರುವನಂತಪುರ: ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಉಪಚುನಾವಣೆ (Wayanad Bypolls)ಯ ಚಟುವಟಿಕೆ ಗರಿಗೆದರಿದೆ. ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) ಭರ್ಜರಿ ರೋಡ್‌ ಶೋ ನಡೆಸಿ ಬುಧವಾರ (ಅಕ್ಟೋಬರ್‌ 23) ನಾಮಪತ್ರ ಸಲ್ಲಿಸಿದ್ದಾರೆ. ಹಲವು ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿರುವ ಪ್ರಿಯಾಂಕಾ ಗಾಂಧಿ ಇದೇ ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಅದೂ ತಮ್ಮ ಸಹೋದರ ರಾಹುಲ್‌ ಗಾಂಧಿ (Rahul Gandhi) ರಾಜೀನಾಮೆಯಿಂದ ತೆರವಾದ ಸ್ಥಾನದಿಂದಲೇ ಕಣಕ್ಕಿಳಿಯುತ್ತಿರುವುದು ವಿಶೇಷ. ಕಾಂಗ್ರೆಸ್‌ ನಾಯಕರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದ ಪ್ರಿಯಾಂಕಾ ಗಾಂಧಿ ಶಕ್ತಿ ಪ್ರದರ್ಶಿಸುವ ಮೂಲಕ ಪ್ರಬಲ ಸ್ಪರ್ಧೆಯ ಸೂಚನೆ ನೀಡಿದ್ದಾರೆ. ಈ ಮಧ್ಯೆ ನಾಮಪತ್ರ ಸಲ್ಲಿಸುವ ವೇಳೆ ಗಾಂಧಿ ಕುಟುಂಬ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರಿಗೆ ಅವಮಾನ ಮಾಡಿದೆ ಎಂದು ಬಿಜೆಪಿ ದೂರಿದೆ (BJP V/S Congress).

ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಚೇರಿ ಹೊರಗೆ ನಿಂತಿದ್ದರು ಎನ್ನಲಾದ ವಿಡಿಯೊ ವೈರಲ್‌ ಆಗಿದೆ. ಇದನ್ನು ಮುಂದಿಟ್ಟುಕೊಂಡು ಬಿಜೆಪಿ ಇದೀಗ ಕಾಂಗ್ರೆಸ್‌ ವಿರುದ್ದ ವಾಗ್ದಾಳಿ ನಡೆಸಿದೆ.

ವಿಡಿಯೊದಲ್ಲಿ ಏನಿದೆ?

ತಮ್ಮ ಕುಟುಂಬಸ್ಥರ ಜತೆಗೆ ಜಿಲ್ಲಾಧಿಕಾರಿ ಕಚೇರಿ ಒಳಗೆ ತೆರಳಿದ ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಲೆ ಕಚೇರಿ ಬಾಗಿಲನ್ನು ಸ್ವಲ್ಪ ತೆರೆದಾಗ ಹೊರಗಿನಿಂದ ಮಲ್ಲಿಕಾರ್ಜುನ ಖರ್ಗೆ ಅವರು ಒಳಗೆ ಇಣುಕುತ್ತಿರುವುದು ವಿಡಿಯೊದಲ್ಲಿ ಕಂಡು ಬರುತ್ತಿದೆ. ಇದನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ. ದಲಿತ ಮುಖಂಡ ಖರ್ಗೆ ಅವರನ್ನು ಹೊರಗೆ ಇರಿಸಿ ಗಾಂಧಿ ಕುಟುಂಬ ದಲಿತ ನಾಯಕನಿಗೆ ಅವಮಾನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಾಯಕರಾದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಕೇಂದ್ರದ ಮಾಜಿ ಸಚಿವ ರಾಜೀವ್‌ ಚಂದ್ರಶೇಖರ್‌, ಅಮಿತ್‌ ಮಾಳವಿಯಾ, ಪ್ರಲ್ಹಾದ್ ಜೋಶಿ ಮತ್ತಿತರರು ಕಾಂಗ್ರೆಸ್‌ ವಿರುದ್ಧ ಹರಿ ಹಾಯ್ದಿದ್ದಾರೆ. ಮಲ್ಲಿಕಾರ್ಜುನ್‌ ಖರ್ಗೆ ಅವರನ್ನು ಅವಮಾನಿಸಲಾಗಿದೆ ಎಂದು ದೂರಿದ್ದಾರೆ. ಪಕ್ಷದ ಹಿರಿಯ ನಾಯಕ ಖರ್ಗೆ ಅವರನ್ನು ಕಾಂಗ್ರೆಸ್‌ನ ನಕಲಿ ಗಾಂಧಿ ಕುಟುಂಬ ಈ ರೀತಿ ನಡೆಸಿಕೊಳ್ಳಬಾರದಿತ್ತು ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

“ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ ಅವರು ನಾಮಪತ್ರ ಸಲ್ಲಿಸುವಾಗ ಖರ್ಗೆ ಸಾಹೇಬರೇ ನೀವು ಎಲ್ಲಿದ್ದಿರಿ? ನಿಮ್ಮನ್ನು ಹೊರಗಿಡಲಾಗಿತ್ತು- ಏಕೆಂದರೆ ನೀವು ಅವರ ಕುಟುಂಬದವರಲ್ಲ. ಸೋನಿಯಾ ಕುಟುಂಬದ ದುರಹಂಕಾರ ಮತ್ತು ಸವಲತ್ತಿನ ಬಲಿಪೀಠದಲ್ಲಿ ಆತ್ಮಗೌರವ ಹಾಗೂ ಘನತೆಯನ್ನು ಬಲಿ ನೀಡಲಾಗುತ್ತಿದೆ. ಅವರು ಹಿರಿಯ ದಲಿತ ನಾಯಕ ಮತ್ತು ಪಕ್ಷದ ಅಧ್ಯಕ್ಷರನ್ನೇ ಹೀಗೆ ನಡೆಸಿಕೊಳ್ಳುವುದಾದರೆ, ವಯನಾಡಿನ ಜನರನ್ನು ಹೇಗೆ ನಡೆಸಿಕೊಳ್ಳಬಹುದು ಎಂದು ಒಮ್ಮೆ ಕಲ್ಪಿಸಿಕೊಳ್ಳಿ” ಎಂದು ರಾಜೀವ್ ಚಂದ್ರಶೇಖರ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

“ಹಿರಿಯ ನಾಯಕ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಿಯಾಂಕಾ ವಾದ್ರಾ ಅವರ ನಾಮನಿರ್ದೇಶನದಿಂದ ಹೊರಗಿಡಲಾಗಿದೆ. ಅವರು ದಲಿತರು ಎಂಬ ಕಾರಣಕ್ಕೆ ಅವರನ್ನು ಹೊರಗಿಟ್ಟಿದ್ದರೇʼʼ? ಎಂದು ಅಮಿತ್ ಮಾಳವೀಯ ಪ್ರಶ್ನಿಸಿದ್ದಾರೆ. “ಪ್ರಿಯಾಂಕಾ ವಾದ್ರಾ ಅವರ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೊಠಡಿಯಿಂದ ಹೊರಗೆ ಇರಿಸಿದ್ದಾರೆ. ಇದೇ ರೀತಿ ಮೀಸಲಾತಿ ರದ್ದತಿ ಬಳಿಕ ದಲಿತ ಸಮುದಾಯದ ಜನರ ಗೌರವ ಮತ್ತು ಅವಕಾಶಗಳನ್ನು ಕೂಡ ರಾಹುಲ್ ಗಾಂಧಿ ಇಲ್ಲದಾಗಿಸುತ್ತಾರೆ. ಖರ್ಗೆ ಅವರನ್ನು ಗಾಂಧಿ ಕುಟುಂಬ ಈ ರೀತಿ ಅವಮಾನಿಸುವುದಾದರೆ, ದಲಿತ ಸಮುದಾಯದ ಕಡೆಗೆ ಅವರಲ್ಲಿ ಇರುವ ದ್ವೇಷವನ್ನು ಊಹಿಸಿ” ಎಂದು ಬಿಜೆಪಿ ಟೀಕಿಸಿದೆ.

ಕಾಂಗ್ರೆಸ್‌ ತಿರುಗೇಟು

ಇತ್ತ ಬಿಜೆಪಿ ಈ ಟೀಕೆಗಳಿಗೆ ಪ್ರತಿಕ್ರಿಯಿಸಿದೆ. ಕಾಂಗ್ರೆಸ್ ಹಿರಿಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರೊಂದಿಗೆ ಖರ್ಗೆ ಕುಳಿತಿರುವ ಚಿತ್ರಗಳನ್ನು ಕಾಂಗ್ರೆಸ್ ಪೋಸ್ಟ್‌ ಮಾಡಿದೆ. ಬಿಜೆಪಿ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ ಎಂದು ತಿರುಗೇಟು ನೀಡಿದೆ. ಒಟ್ಟಿನಲ್ಲಿ ಸದ್ಯ ಈ ವಿಚಾರ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.

ಈ ಸುದ್ದಿಯನ್ನೂ ಓದಿ: Priyanka Gandhi: 12 ಕೋಟಿ ರೂ. ಆಸ್ತಿಯ ಒಡತಿ ಪ್ರಿಯಾಂಕಾ ಗಾಂಧಿ; ಇಲ್ಲಿದೆ ಕಾಂಗ್ರೆಸ್‌ ನಾಯಕಿ ಘೋಷಿಸಿದ ವಿವರ