Sunday, 15th December 2024

ಪುದುಚೇರಿಯಲ್ಲಿ ಕಮಲ ಅರಳಲಿದೆ: ಜೆ.ಪಿ.ನಡ್ಡಾ

ಪುದುಚೇರಿ: ಮುಂಬರುವ ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಲಿದೆ. ಭ್ರಷ್ಟ ಮುಕ್ತ, ಅಭಿವೃದ್ಧಿ ಕೇಂದ್ರಿತ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ವಿಶ್ವಾಸ ವ್ಯಕ್ತಪಡಿಸಿದರು.

ಮುಂಬರುವ ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ 30 ಸ್ಥಾನಗಳ ಪೈಕಿ 23 ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‌ಪುದುಚೇರಿಯಲ್ಲಿ ಮೊದಲ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಜೆ.ಪಿ.ನಡ್ಡಾ, ‘ಕಳೆದ 35 ವರ್ಷಗಳಿಂದ ಪುದುಚೇರಿಯಲ್ಲಿ ಕಾಂಗ್ರೆಸ್‌ ಆಡಳಿತದಡಿ ಶೇಕಡ 52 ರಷ್ಟು ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ. ಕಾಂಗ್ರೆಸ್‌ ಸರ್ಕಾರ ಹಲವು ಸಮಯದಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಕೂಡ ನಡೆಸಿಲ್ಲ’ ಎಂದು ದೂರಿದರು.

‘ಮಾಜಿ ಪ್ರಧಾನಿ ವಾಜಪೇಯಿ ಅವರ ಅಧಿಕಾರಾವಧಿಯಲ್ಲಿ ಪುದುಚೇರಿಗೆ ಕೇಂದ್ರದಿಂದ ಶೇಕಡ 70 ರಷ್ಟು ಅನುದಾನ ನೀಡಲಾ ಗಿತ್ತು. ಆದರೆ ಕೇಂದ್ರದಲ್ಲಿ ನಾರಾಯಣ ಸ್ವಾಮಿ ಅವರು ಸಚಿವರಾಗಿದ್ದಾಗ ಈ ಅನುದಾನವನ್ನು ಶೇಕಡ 30 ರಷ್ಟಕ್ಕೆ ಇಳಿಸಲಾಯಿತು’ ಎಂದು ಅವರು ದೂರಿದರು.

ಏಪ್ರಿಲ್‌ ಅಥವಾ ಮೇ ತಿಂಗಳ ಆರಂಭದಲ್ಲಿ ಪುದುಚೇರಿಯ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆ ಇದೆ.