ಆಗ್ರಾ: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ರಾಮ್ ಶಂಕರ್ ಕಥೇರಿಯಾ ಅವರಿಗೆ ಆಗ್ರಾ ನ್ಯಾಯಾಲಯ ಶನಿವಾರ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಮಾಜಿ ಕೇಂದ್ರ ಸಚಿವ ಕಥೇರಿಯಾ 2011ರಲ್ಲಿ ವಿದ್ಯುತ್ ಸರಬರಾಜು ಕಂಪನಿಯ ಉದ್ಯೋಗಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದಾರೆ.
ಉತ್ತರ ಪ್ರದೇಶದ ಇಟಾವಾ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಲೋಕಸಭೆಯಿಂದ ಅನರ್ಹಗೊಳ್ಳುವ ಸಾಧ್ಯತೆಯಿದೆ. ಪ್ರಧಾನಿ ಮೋದಿ ಅವರನ್ನು ಟೀಕಿಸಿದ ಪ್ರಕರಣದಲ್ಲಿ ಎರಡು ವರ್ಷ ಜೈಲು ಶಿಕ್ಷೆಗೆ ಒಳಗಾದ ರಾಹುಲ್ ಗಾಂಧಿ ಲೋಕ ಸಭೆಯಿಂದ ಅನರ್ಹತೆ ಪಡೆದಿದ್ದರು. ಇದೀಗ ಅವರು ಸುಪ್ರೀಮ್ ಕೋರ್ಟ್ನಿಂದ ತಡೆ ತಂದಿದ್ದಾರೆ. ಅದರ ಬೆನ್ನಲ್ಲೇ ಬಿಜೆಪಿ ಎಂಪಿಯೊಬ್ಬರು ಅದೇ ರೀತಿ ಅನರ್ಹತೆಗೆ ಒಳಗಾಗುವ ಸಾಧ್ಯತೆಗಳಿವೆ.
ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಯಾವುದೇ ಅಪರಾಧಕ್ಕಾಗಿ ಶಿಕ್ಷೆಗೊಳಗಾದ ಚುನಾಯಿತ ಪ್ರತಿನಿಧಿಯು ಜನ ಪ್ರತಿನಿಧಿ ಕಾಯ್ದೆ, 1951 ರ ಅಡಿಯಲ್ಲಿ ತಕ್ಷಣದ ಅನರ್ಹತೆಯನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಕಥೇರಿಯಾ ಕೂಡ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ.
ರಾಮ್ ಶಂಕರ್ ಕಥೇರಿಯಾ ಉತ್ತರ ಪ್ರದೇಶದ ಇಟಾವಾ ಕ್ಷೇತ್ರದ ಬಿಜೆಪಿ ಸಂಸದ. ನವೆಂಬರ್ 2014 ರಿಂದ ಜುಲೈ 2016 ರವರೆಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸಹಾಯಕ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಕಥೇರಿಯಾ ಅವರು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
2019 ರಲ್ಲಿ, ಆಗ್ರಾದಲ್ಲಿ ಟೋಲ್ ಪ್ಲಾಜಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಥೇರಿಯಾ ವಿರುದ್ಧ ಪ್ರಕರಣ ದಾಖಲಾಗಿತ್ತು.