Thursday, 12th December 2024

ಪಂಜಾಬ್‌ನಲ್ಲಿ ಬಿಜೆಪಿ ಏಕಾಂಗಿ ಸ್ಪರ್ಧೆ

ಚಂಡೀಗಢ: ಪಂಜಾಬ್‌ನಲ್ಲಿ ಲೋಕಸಭಾ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸುವುದಾಗಿ ಬಿಜೆಪಿ ಪ್ರಕಟಿಸಿದೆ.

ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಜತೆ ಮೈತ್ರಿ ಮಾಡಿಕೊಳ್ಳದಿರಲು ಬಿಜೆಪಿ ನಿರ್ಧರಿಸಿದೆ.

ಪಂಜಾಬ್ ಬಿಜೆಪಿ ಘಟಕದ ಅಧ್ಯಕ್ಷ ಸುನಿಲ್ ಜಾಖಡ್, ಜನರ ಹಾಗೂ ಕಾರ್ಯಕರ್ತರ ಅಭಿಪ್ರಾಯಗಳ ಆಧಾರದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮುಂದಾಳತ್ವದಲ್ಲಿ ಬಿಜೆಪಿ ಮಾಡಿದ ಕೆಲಸಗಳು ಯಾರಿಂದಲೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಪಂಜಾಬ್‌ನಲ್ಲಿ 13 ಲೋಕಸಭಾ ಕ್ಷೇತ್ರಗಳ ಚುನಾವಣೆ ಜೂನ್ 1ರಂದು ನಡೆಯಲಿದೆ.

2019ರಲ್ಲಿ ಶಿರೋಮಣಿ ಅಕಾಲಿ ದಳ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿತ್ತು. ಆದರೆ ನಿರೀಕ್ಷಿತ ಫಲಿತಾಂಶ ಪಡೆಯುವಲ್ಲಿ ವಿಫಲವಾಗಿತ್ತು. 2020ರಲ್ಲಿ ಕೃಷಿ ಮಸೂದೆ ವಿಚಾರವಾಗಿ ಮುನಿಸಿಕೊಂಡಿದ್ದ ಶಿರೋಮಣಿ ಅಕಾಲಿ ದಳ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಿಂದ ಹೊರಬರಲು ನಿರ್ಧರಿಸಿತ್ತು.