ನವದೆಹಲಿ: “ಮೂರನೇ ಬಾರಿ ಮೋದಿ ಸರ್ಕಾರ; ಈ ಬಾರಿ ಬಿಜೆಪಿ 400 ಸ್ಥಾನ ದಾಟಲಿದೆ…” ಇದು ಲೋಕಸಭೆ ಚುನಾವಣೆಗೆ ಬಿಜೆಪಿ ಹೊಸ ಘೋಷ ವಾಕ್ಯವಾಗಿದೆ.
“ತೀಸ್ರಿ ಬಾರ್ ಮೋದಿ ಸರ್ಕಾರ್, ಅಬ್ ಕಿ ಬಾರ್ ಚಾರ್ ಸೌ ಪಾರ್’ ಎಂಬುದು ಬಿಜೆಪಿ ಉದ್ಘೋಷವಾಗಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತಾಗಿ ತೀರ್ಮಾನ ಕೈಗೊಳ್ಳಲಾಗಿದೆ.
ಇತ್ತೀಚೆಗಷ್ಟೇ ‘ಮೋದಿ ಕೀ ಗ್ಯಾರಂಟಿ’ ಘೋಷಣೆ ಹೊರ ಬಿದ್ದಿತ್ತು. ಈಗ “ತೀಸ್ರಿ ಬಾರ್ ಮೋದಿ ಸರ್ಕಾರ್, ಅಬ್ ಕಿ ಬಾರ್ ಚಾರ್ ಸೌ ಪಾರ್’ ಘೋಷವಾಕ್ಯ ವಾಗಲಿದೆ. 2014ರಲ್ಲಿ ಅಚ್ಚೆ ದಿನ್ ಆನೇ ವಾಲೆಹೈ, 2019ರಲ್ಲಿ ಫಿರ್ ಏಕ್ ಬಾರ್ ಮೋದಿ ಸರ್ಕಾರ್ ಎಂಬುದು ಘೋಷವಾಕ್ಯವಾಗಿತ್ತು.
ಸಭೆಯಲ್ಲಿ ಮುಂಬರುವ ಲೋಕಸಭೆ ಚುನಾವಣೆಗೆ ಪಕ್ಷವು ‘ತೀಸ್ರಿ ಬಾರ್ ಮೋದಿ ಸರ್ಕಾರ್, ಅಬ್ ಕಿ ಬಾರ್ 400 ಪಾರ್’ ಎಂಬ ಹೊಸ ಘೋಷಣೆಯನ್ನು ನಿರ್ಧರಿಸಿದೆ. ಸಾರ್ವತ್ರಿಕ ಚುನಾವಣೆಯಲ್ಲಿ 400ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಬಿಜೆಪಿ ಹೊಂದಿದೆ ಎಂದು ಹೇಳಲಾಗಿದೆ.
ರಾಜ್ಯ, ಲೋಕಸಭೆ ಮತ್ತು ವಿಧಾನಸಭೆ ಹಂತಗಳಲ್ಲಿ ಬಿಜೆಪಿ ಸಂಚಾಲಕರು ಮತ್ತು ಸಹ ಸಂಚಾಲಕರನ್ನು ನೇಮಕ ಮಾಡಲು ಸಹ ನಿರ್ಧರಿಸಿದೆ.