ಚಂಡೀಗಡ: ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ನಡೆಯು ತ್ತಿರುವ ಪ್ರತಿಭಟನೆಗೆ ಮೇ 26 ರಂದು ಆರು ತಿಂಗಳು ತುಂಬುತ್ತಿರುವುದರಿಂದ, ಅಂದು ಕರಾಳ ದಿನ ಆಚರಿಸಲು ತೀರ್ಮಾನಿಸಲಾಗಿದೆ.
ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಪಂಜಾಬ್‌ನ ವಿವಿಧ ಪ್ರದೇಶಗಳಿಂದ ರೈತರು ದೆಹಲಿ ಗಡಿಯತ್ತ ದೊಡ್ಡ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದು ರೈತ ಮುಖಂಡರು ಹೇಳಿದ್ದಾರೆ. ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದು ಕೊಳ್ಳಬೇಕು ಎಂದು ಆಗ್ರಹಿಸಿ, ದೆಹಲಿ ಹೊರಭಾಗದ ಸಿಂಘು, ಟಿಕ್ರಿ ಹಾಗೂ ಗಾಜಿಪುರ್ ಗಡಿಗಳಲ್ಲಿ ರೈತರು ಕಳೆದ ನವೆಂಬರ್ ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿ ಭಾನುವಾರ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ರೈತರ ಗುಂಪುಗಳು ಗಡಿಯತ್ತ ಹೋಗುತ್ತವೆ. ಒಂದು ವಾರದ ನಂತರ ಅವರು ಮರಳುತ್ತಾರೆ ಮತ್ತು ಹೊಸ ಗುಂಪುಗಳು ಅವರ ಸ್ಥಾನವನ್ನು ತುಂಬುತ್ತವೆ’ ಎಂದು ಭಾರತ್ ಕಿಸಾನ್ ಯೂನಿಯನ್ ತಿಳಿಸಿದೆ.
ರೈತರ ಹೋರಾಟ ಬೆಂಬಲಿಸಿ ಬುಧವಾರ ಬೆಳಿಗ್ಗೆ ನನ್ನ ಎರಡೂ ಮನೆಗಳ ಮುಂದೆ ಕಪ್ಪು ಬಾವುಟ ಹಾರಿಸುತ್ತೇನೆ’ ಎಂದು ಕಾಂಗ್ರೆಸ್ ಮುಖಂಡ ನವ ಜೋತ್‌ಸಿಂಗ್ ಸಿಧು ಹೇಳಿದ್ದಾರೆ. ಕಾಂಗ್ರೆಸ್ ಸೇರಿದಂತೆ 12 ರಾಜಕೀಯ ಪಕ್ಷಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿವೆ.
ಕೇಂದ್ರ ಹಾಗೂ ರೈತರ ಮಧ್ಯೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದರೂ ಜನವರಿ 22ರ ನಂತರ ಮಾತುಕತೆ ನಡೆದಿಲ್ಲ. ಮಾತುಕತೆ ಪುನರಾರಂಭಿಸುವಂತೆ ಸಂಯುಕ್ತ ಕಿಸಾನ್ ಮೋರ್ಚಾ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳೆದ ಶುಕ್ರವಾರ ಪತ್ರ ಬರೆದಿದೆ.