Sunday, 15th December 2024

ಕಾಕಿನಾಡ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ: ಕಾರ್ಮಿಕರ ಸಾವು, ಆರು ಮಂದಿಗೆ ಗಾಯ

ಕಾಕಿನಾಡ: ಪೂರ್ವ ಗೋದಾವರಿ ಜಿಲ್ಲೆಯ ಕಾಕಿನಾಡ ಬಳಿಯ ರಾಸಾಯನಿಕ ಕಾರ್ಖಾನೆಯಲ್ಲಿ ಗುರುವಾರ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.

ಸರ್ಪವರಂನಲ್ಲಿರುವ ಟೈಚೆ ರಾಸಾಯನಿಕ ಕೈಗಾರಿಕೆಗಳ ಘಟಕದಲ್ಲಿನ ಶೇಖರಣಾ ಟ್ಯಾಂಕ್ ರಾಸಾಯನಿಕ ಕ್ರಿಯೆಯಿಂದಾಗಿ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಬಗ್ಗೆ ವರದಿಯಾಗಿರುವುದಾಗಿ ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.

ನೈಟ್ರಿಕ್ ಆಮ್ಲ ಮತ್ತಿತರ ರಾಸಾಯನಿಕವನ್ನು ಟ್ಯಾಂಕ್ ನಲ್ಲಿ ಶೇಖರಣೆ ಮಾಡಲಾಗಿತ್ತು. ಅತಿ ಬಿಸಿಯಾದ ರಾಸಾಯನಿಕ ದಿಂದಾಗಿ ಸ್ಫೋಟ ಸಂಭವಿಸಿರಬಹುದೆಂದು ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಸಿಎಚ್ ರತ್ನ ಬಾಬು ಹೇಳಿದ್ದಾರೆ.

ಗಾಯಾಳುಗಳನ್ನು ಅಗ್ನಿಶಾಮಕ ಸಿಬ್ಬಂದಿ ಆಸ್ಪತ್ರೆಗೆ ರವಾನಿಸಿದ್ದಾರೆ. ಕೃಷಿ ಸಚಿವ ಕೆ.ಖಾನ್ನಾ ಬಾಬು ಸ್ಥಳಕ್ಕೆ ಭೇಟಿ ನೀಡಿದ್ದು, ರಕ್ಷಣಾ ಕಾರ್ಯಾಚರಣೆಯ ಪರಿಶೀಲನೆ ನಡೆಸಿದ್ದಾರೆ. ಸ್ಫೋಟಕ್ಕೆ ಕಾರಣ ಏನು ಎಂಬುದರ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.