Wednesday, 18th December 2024

Boat Capsized: ಮುಂಬೈ ಬೋಟ್‌ ದುರಂತ; ಮೃತರ ಸಂಖ್ಯೆ 13ಕ್ಕೆ ಏರಿಕೆ: ಅಪಘಾತದ ವಿಡಿಯೊ ವೈರಲ್‌

Boat Capsized

ಮುಂಬೈ: ಮಹಾರಾಷ್ಟ್ರದ ಮುಂಬೈ ಕರಾವಳಿಯಲ್ಲಿ ನಡೆದ ಬೋಟ್‌ ಅಪಘಾತದಲ್ಲಿ ಮೃತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಮುಂಬೈಯ ಐಕಾನಿಕ್ ಗೇಟ್‌ವೇ ಆಫ್ ಇಂಡಿಯಾ (Iconic Gateway of India)ದಿಂದ ಎಲಿಫೆಂಟಾ ದ್ವೀಪ (Elephanta Island)ಕ್ಕೆ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ನೀಲ್‌ ಕಮಲ್‌ ಹೆಸರಿನ ಬೋಟ್‌ಗೆ ಸ್ಪೀಡ್‌ ಬೋಟ್‌ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ (Boat Capsized).

ನೀಲ್‌ ಕಮಲ್‌ ಬೋಟ್‌ ಒಟ್ಟು 110 ಜನರನ್ನು ಹೊತ್ತೊಯ್ಯುತ್ತಿತ್ತು ಎನ್ನಲಾಗಿದೆ. ಸದ್ಯ ಘಟನೆಯ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. 13 ಮಂದಿ ಮೃತಪಟ್ಟಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ. ಉಳಿದ 94 ಮಂದಿಯನ್ನು ರಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ಬೋಟ್‌ ಇದ್ದಕ್ಕಿದ್ದಂತೆ ಮುಳುಗಲು ಕಾರಣವೇನು ಎನ್ನುವುದು ಗೊತ್ತಾಗಿರಲಿಲ್ಲ. ಇದೀಗ ಸ್ಪೀಡ್‌ ಬೋಟ್‌ ಡಿಕ್ಕಿ ಹೊಡೆಯುವ ದೃಶ್ಯ ಹೊರ ಬಂದಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಪೊಲೀಸ್‌ ಸಿಬ್ಬಂದಿ ಮತ್ತು ಸ್ಥಳೀಯ ಮೀನುಗಾರಿಕಾ ದೋಣಿಗಳ ಸಹಾಯದಿಂದ ಪ್ರಯಾಣಿಕರನ್ನು ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದೆ.

ವ್ಯಾಪಕ ಶೋಧ

ಭಾರತೀಯ ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ಕಾರ್ಯ ಪ್ರವೃತ್ತವಾಗಿವೆ. 11 ನೌಕಾ ಪಡೆಯ ದೋಣಿಗಳು, ಕರಾವಳಿ ಪೊಲೀಸ್‌ನ 3 ದೋಣಿಗಳು ಮತ್ತು ಕೋಸ್ಟ್ ಗಾರ್ಡ್‌ನ 1 ದೋಣಿಯನ್ನು ಈ ಪ್ರದೇಶದಲ್ಲಿ ನಿಯೋಜಿಸಲಾಗಿದೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 4 ಹೆಲಿಕಾಪ್ಟರ್‌ಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ. ಪೊಲೀಸ್ ಸಿಬ್ಬಂದಿ, ಜವಾಹರಲಾಲ್ ನೆಹರೂ ಬಂದರು ಪ್ರಾಧಿಕಾರದ ಕಾರ್ಮಿಕರು ಮತ್ತು ಈ ಪ್ರದೇಶದ ಮೀನುಗಾರರೂ ಕೈ ಜೋಡಿಸಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (Devendra Fadnavis) ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಿರುವ ಎಲ್ಲ ಯಂತ್ರೋಪಕರಣಗಳನ್ನು ಒದಗಿಸಲು ಜಿಲ್ಲಾಡಳಿತಕ್ಕೆ ಆದೇಶ ನೀಡಿದ್ದೇನೆ ಎಂದು ತಿಳಿಸಿದ್ದಾರೆ.‌

“ಎಲಿಫೆಂಟಾ ಕಡೆಗೆ ಹೋಗುತ್ತಿದ್ದ ನೀಲ್‌ ಕಮಲ್‌ ದೋಣಿ ಅಪಘಾತಕ್ಕೀಡಾಗಿರುವ ಬಗ್ಗೆ ವರದಿಗಳು ಬಂದಿವೆ. ನೌಕಾಪಡೆ, ಕೋಸ್ಟ್ ಗಾರ್ಡ್, ಬಂದರು ಮತ್ತು ಪೊಲೀಸ್ ತಂಡಗಳ ದೋಣಿಗಳನ್ನು ಸಹಾಯಕ್ಕಾಗಿ ತಕ್ಷಣವೇ ಕಳುಹಿಸಲಾಗಿದೆ. ನಾವು ಜಿಲ್ಲಾ ಮತ್ತು ಪೊಲೀಸ್ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಅದೃಷ್ಟವಶಾತ್ ಹೆಚ್ಚಿನ ಪ್ರಯಾಣಿಕರನ್ನು ರಕ್ಷಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಿರುವ ಎಲ್ಲ ಯಂತ್ರೋಪಕರಣಗಳನ್ನು ನಿಯೋಜಿಸಲು ಜಿಲ್ಲಾಡಳಿತಕ್ಕೆ ಆದೇಶ ನೀಡಲಾಗಿದೆʼʼ ಎಂದು ಸಿಎಂ ಫಡ್ನವೀಸ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Boat Capsized: ಮುಂಬೈ ಬೋಟ್ ದುರಂತದಲ್ಲಿ ಓರ್ವ ಸಾವು; ಮುಂದುವರಿದ ರಕ್ಷಣಾ ಕಾರ್ಯ