ವಿಶಾಖಪಟ್ಟಣಂ: ಜಟ್ಟಿ ಪ್ರದೇಶವೊಂದರಲ್ಲಿ ಸೋಮವಾರ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ 35 ಮೀನುಗಾರಿಕಾ ದೋಣಿಗಳು ಸುಟ್ಟು ಕರಕಲಾಗಿವೆ.
ಮೀನುಗಾರಿಕಾ ದೋಣಿಗಳು ಲಂಗರು ಹಾಕಿದ್ದವು ಎನ್ನಲಾಗಿದೆ. ಸ್ಥಳದಲ್ಲಿದ್ದ 8 ಎಲ್ಪಿಜಿ ಸಿಲಿಂಡರುಗಳಿಂದ ಸ್ಫೋಟ ಸಂಭವಿಸಿರಬಹುದೆಂದು ಅಧಿಕಾರಿಗಳು ಶಂಕಿಸಿದ್ದಾರೆ. ಮಾಹಿತಿ ಪಡೆದ ನಂತರ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಬೆಳಗಿನ ಜಾವ 4 ಗಂಟೆ ಸುಮಾರಿಗೆ ಮೂರು ಗಂಟೆಗಳ ಹೋರಾಟದ ನಂತರ ಬೆಂಕಿಯನ್ನು ನಂದಿಸಿದ್ದಾರೆ ಎಂದು ವಿಶಾಖಪಟ್ಟಣ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಎಸ್ ರೇಣುಕಯ್ಯ ತಿಳಿಸಿದ್ದಾರೆ.
“ಕೆಲವು ಹುಡುಗರು ತಡರಾತ್ರಿ ಅಲ್ಲಿ ಪಾರ್ಟಿ ಮಾಡುತ್ತಿದ್ದ ವೇಳೆ ಒಂದು ಹಡಗಿನಲ್ಲಿ ಬೆಂಕಿ ಹೊತ್ತಿಕೊಂಡಿದೆ, ಅದೃಷ್ಟವಶಾತ್ ಇತರ ಬೋಟುಗಳು ಬಂದು ಆ ಹಡಗನ್ನು ಸಮುದ್ರಕ್ಕೆ ಬಿಟ್ಟಿದ್ದಾರೆ. ಹಡಗಿನಲ್ಲಿ ಸಂಪೂರ್ಣ ಟ್ಯಾಂಕರ್ ಡೀಸೆಲ್ ಮತ್ತು ಗ್ಯಾಸ್ ಸಿಲಿಂಡರುಗಳು ಇದ್ದವು. ಆದ್ದರಿಂದ ಬೆಂಕಿಯ ಜ್ವಾಲೆಯು ಜೆಟ್ಟಿಯಲ್ಲಿ ನಿಲ್ಲಿಸಲಾಗಿದ್ದ ಇತರ ಹಡಗುಗಳಿಗೆ ವ್ಯಾಪಿಸಿದೆ ಎಂದು ಎಡಿಜಿಪಿ ಕಾನೂನು ಮತ್ತು ಸುವ್ಯವಸ್ಥೆ ರವಿಶಂಕರ್ ತಿಳಿಸಿದ್ದಾರೆ.
ಐದು ಗಂಟೆ ಕಾರ್ಯಾಚರಣೆ ಬಳಿಕ ಬೆಂಕಿ ಹತೋಟಿಗೆ ಬಂದಿದೆ.
ಬೆಂಕಿ ಅವಘಡದಿಂದ ಹಲವು ಕೋಟಿ ಮೌಲ್ಯದ ಆಸ್ತಿ ನಷ್ಟವಾಗಿದೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸು ತ್ತಿದ್ದಾರೆ. ಈ ಮಧ್ಯೆ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಬೆಂಕಿ ಆವಘಡ ಕುರಿತು ವಿವರವಾದ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.