Thursday, 21st November 2024

Bomb threat: ʻಮೂಲೆ ಮೂಲೆಯಲ್ಲೂ ಬಾಂಬ್‌ ಇಟ್ಟಿದ್ದೇನೆ…ʼ ಗುಜರಾತ್‌ನ 10 ಹೊಟೇಲ್‌ಗಳಿಗೆ ಬೆದರಿಕೆ

bomb threat

ಅಹಮದಾಬಾದ್‌: ತಿರುಪತಿಯ ಮೂರು ಹೊಟೇಲ್‌ಗಳಿಗೆ ಬಾಂಬ್‌ ಬೆದರಿಕೆ(Bomb threat) ಬಂದಿರುವ ಬೆನ್ನಲ್ಲೇ ಇದೀಗ ಗುಜರಾತ್‌ನ 10 ಹೊಟೇಲ್‌ಗಳಿಗೂ ಅದೇ ರೀತಿಯ ಬೆದರಿಕೆ ಬಂದಿದೆ. ಇಂಪೀರಿಯಲ್ ಪ್ಯಾಲೇಸ್, ಸಯಾಜಿ ಹೋಟೆಲ್, ಸೀಸನ್ಸ್ ಹೋಟೆಲ್ ಮತ್ತು ಗ್ರ್ಯಾಂಡ್ ರೀಜೆನ್ಸಿ, ಸೇರಿದಂತೆ ಅನೇಕ ಸುಪ್ರಸಿದ್ಧ ಹೊಟೇಲ್‌ಗಳಿಗೆ ಇ-ಮೇಲ್‌ ಮೂಲಕ ಬೆದರಿಕೆ ಸಂದೇಶ ಬಂದಿದೆ.

ಇನ್ನುಈ ಬೆದರಿಕೆ ಸಂದೇಶ ಬರುತ್ತಿದ್ದಂತೆ ಹೊಟೇಲ್‌ಗೆ ಗ್ರಾಹಕರು ಮತ್ತು ಸ್ಥಳೀಯ ನಿವಾಸಿಗಳಲ್ಲಿ ಭಾರೀ ಆತಂಕ ಸೃಷ್ಟಿಯಾಗಿದೆ. ಬೆದರಿಕೆ ಇಮೇಲ್‌ನ ಮೂಲವನ್ನು ಪತ್ತೆಹಚ್ಚಲು ರಾಜ್‌ಕೋಟ್ ಪೊಲೀಸರು ಸಂಪೂರ್ಣ ತನಿಖೆ ಆರಂಭಿಸಿದ್ದಾರೆ. ಅತಿಥಿಗಳು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬೆದರಿಕೆ ಬಂದಿರುವ ಹೋಟೆಲ್‌ಗಳಲ್ಲಿ ಅಧಿಕಾರಿಗಳು ಕಟ್ಟು ನಿಟ್ಟಿನ ತಪಾಸಣೆ ಪ್ರಾರಂಭಿಸಿದ್ದಾರೆ.

ನಿಮ್ಮ ಹೋಟೆಲ್‌ನ ಪ್ರತಿಯೊಂದು ಸ್ಥಳದಲ್ಲಿ ನಾನು ಬಾಂಬ್‌ಗಳನ್ನು ಇರಿಸಿದ್ದೇನೆ. ಕೆಲವೇ ಗಂಟೆಗಳಲ್ಲಿ ಬಾಂಬ್‌ಗಳು ಸ್ಫೋಟಗೊಳ್ಳುತ್ತವೆ. ಇಂದು ಅನೇಕ ಅಮಾಯಕರ ಜೀವಗಳು ಬಲಿಯಾಗುತ್ತವೆ. ತಕ್ಷಣ ಜನರನ್ನು ಸ್ಥಳಾಂತರಿಸಿ ಎಂದು ಹೋಟೆಲ್‌ಗಳಿಗೆ ಬಂದ ಇಮೇಲ್ ಸಂದೇಶ ಬಂದಿದೆ ಎನ್ನಲಾಗಿದೆ.

ಏರ್ ಇಂಡಿಯಾ, ಇಂಡಿಗೋ, ವಿಸ್ತಾರಾ ಮತ್ತು ಇತರ ಹಲವಾರು ಭಾರತೀಯ ವಿಮಾನಯಾನ ಸಂಸ್ಥೆಗಳು ಕಳೆದ 10 ದಿನಗಳಲ್ಲಿ 250 ಹೆಚ್ಚು ಬೆದರಿಕೆ ಸಂದೇಶಗಳು ಬಂದಿರುವ ಬೆನ್ನಲ್ಲೇ ಇದೀಗ ಕಿಡಿಗೇಡಿಗಳು ಹೊಟೇಲ್‌ಗಳಿಗೆ ಸಂದೇಶ ಕಳುಹಿಸುತ್ತಿದ್ದಾರೆ.

ಇನ್ನು ನಿನ್ನೆ ತಿರುಪತಿಯ ಮೂರು ಹೊಟೇಲ್‌ಗಳಿಗೂ ಬಾಂಬ್‌ ಬೆದರಿಕೆ ಸಂದೇಶಗಳು ಬಂದಿದ್ದವು. ಈ ಬೆದರಿಕೆ ಸಂದೇಶದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟ್ಯಾಲಿನ್‌ ಅವರ ಕುಟುಂಬಸ್ಥರು ಭಾಗಿಯಾಗಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು. ಉಪ ಮುಖ್ಯಮಂತ್ರಿ ಉದಯನಿಧಿ ಸ್ಟ್ಯಾಲಿನ್‌ ಅವರ ಪತ್ನಿ ಮತ್ತು ರಾಜ್ಯದ ಉನ್ನತ ಪೊಲೀಸ್ ಅಧಿಕಾರಿ ಹೆಸರನ್ನು ಈ ಬೆದರಿಕೆ ಇ-ಮೇಲ್‌ನಲ್ಲಿ ಉಲ್ಲೇಖಿಸಲಾಗಿತ್ತು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಇನ್ನು ಇದೊಂದು ಹುಸಿ ಬಾಂಬ್‌ ಬೆದರಿಕೆ ಎಂಬುದು ತನಿಖೆ ವೇಳೆ ಬಯಲಾಗಿದ್ದು, ತಮಿಳುನಾಡಿನ ಉನ್ನತ ಪೊಲೀಸ್ ಅಧಿಕಾರಿ ಶಂಕರ್ ಜಿವಾಲ್ ಮತ್ತು ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರ ಪತ್ನಿ ಕಿರುತಿಗಾ ಉದಯನಿಧಿ ಅವರ ಹೆಸರನ್ನೂ ಅದರಲ್ಲಿ ಉಲ್ಲೇಖಿಸಲಾಗಿದೆ. ಸಾಲದೆನ್ನುವಂತೆ ಮಾದಕವಸ್ತು ಕಳ್ಳಸಾಗಣೆ ಜಾಲದ ಕಿಂಗ್‌ಪಿನ್ ಜಾಫರ್ ಸಾದಿಕ್‌ನ ಹೆಸರನ್ನೂ ಕಿಡಿಗೇಡಿಗಳು ಇ-ಮೇಲ್‌ನಲ್ಲಿ ಉಲ್ಲೇಖಿಸಿದ್ದಾರೆ. ಈತನನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಮತ್ತು ಜಾರಿ ನಿರ್ದೇಶನಾಲಯವು ಈ ಹಿಂದೆಯೇ ಅರೆಸ್ಟ್‌ ಮಾಡಿದೆ.

ಸರ್ಕಲ್ ಇನ್ಸ್ ಪೆಕ್ಟರ್ ಶ್ರೀನಿವಾಸಲು ಮಾಹಿತಿ ನೀಡಿದ್ದು, ತಿರುಪತಿಯ ಮೂರು ಹೋಟೆಲ್‌ಗಳಲ್ಲಿ ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ. ಎಫ್‌ಐಆರ್ ದಾಖಲಿಸಲಾಗಿದೆ. ವಿವಿಧ ಆಯಾಮಗಳಲ್ಲಿ ನಮ್ಮ ತನಿಖೆಯು ನಡೆಯುತ್ತಿದೆ. ನಮ್ಮ ವಿಚಾರಣೆ ಮುಗಿದ ನಂತರ ಈ ಬೆದರಿಕೆಗೆ ಕಾರಣರಾದವರನ್ನು ತ್ವರಿತವಾಗಿ ಗುರುತಿಸಲು ನಾವು ಬದ್ಧರಾಗಿದ್ದೇವೆ ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ: Bomb Threat: ತಿರುಪತಿ ಹೊಟೇಲ್‌ಗಳಿಗೆ ಬಾಂಬ್‌ ಬೆದರಿಕೆ; ಉದಯನಿಧಿ ಸ್ಟ್ಯಾಲಿನ್‌ ಪತ್ನಿ ಕೈವಾಡ ಇದೆ ಎಂದು ಇ-ಮೇಲ್‌ ಸಂದೇಶ