Sunday, 1st December 2024

Bomb threat: ಹುಸಿಬಾಂಬ್‌ ಬೆದರಿಕೆ; ವಿಮಾನಯಾನ ಸಂಸ್ಥೆಗಳಿಗಾಗುತ್ತಿರುವ ನಷ್ಟ ಎಷ್ಟು ಗೊತ್ತಾ? ಇಲ್ಲಿದೆ ಡಿಟೇಲ್ಸ್‌

bomb threat

ನವದೆಹಲಿ: ಕಳೆದೊಂದು ವಾರದಿಂದ ಭಾರತೀಯ ವಿಮಾನ(Indian Airlines)ಗಳಿಗೆ ಒಂದರ ಹಿಂದೆ ಒಂದರಂತೆ ಬಾಂಬ್‌ ಬೆದರಿಕೆ(Bomb threat) ಕರೆಗಳು ಬರುತ್ತಲೇ ಇವೆ. ಇಂದು ಕೂಡ ವಿದೇಶಕ್ಕೆ ಹಾರಾಟ ನಡೆಸಬೇಕಿದ್ದ ಮೂರು ವಿಸ್ತಾರ ವಿಮಾನಗಳ ಸಂಚಾರವನ್ನು ಬೆದರಿಕೆ ಕರೆಗಳಿಂದಾಗಿ ರದ್ದುಗೊಳಿಸಬೇಕಾಯಿತು. ಬಳಿಕ ಇದೊಂದು ಹುಸಿಬಾಂಬ್‌ ಕರೆ ಎಂಬುದು ತಿಳಿಯಿತು. ಹೀಗೆ ಕಳೆದೊಂದು ವಾರದಿಂದ ಬರುತ್ತಿರುವ ಹುಸಿ ಬಾಂಬ್‌ ಬೆದರಿಕೆ ಕರೆಗಳಿಂದಾಗಿ 40 ಕ್ಕೂ ಹೆಚ್ಚು ವಿಮಾನಗಳನ್ನು ತುರ್ತು ಭೂಸ್ಪರ್ಶ ಮಾಡಲಾಗಿದೆ. ಇಂತಹ ಹುಸಿ ಬಾಂಬ್‌ ಕರೆಗಳಿಂದಾಗಿ ಭಾರತೀಯ ವಿಮಾನಯಾನ ಸಂಸ್ಥೆಗಳಿಗಾಗುತ್ತಿರುವ ನಷ್ಟ ಎಷ್ಟು ಗೊತ್ತಾ? ಇಲ್ಲಿದೆ ಸಂಪೂರ್ಣ ವರದಿ

ಹುಸಿ ಬಾಂಬ್‌ ಕರೆಗಳಿಂದ ಪ್ರಯಾಣಿಕರಿಗೆ ಎಷ್ಟು ಅಡಚಣೆಯುಂಟಾಗುತ್ತದೋ ಅದಕ್ಕಿಂತಲೂ ಹೆಚ್ಚು ಪರಿಣಾಮ ವಿಮಾನಯಾನ ಸಂಸ್ಥೆಗಳ ಮೇಲಾಗುತ್ತದೆ. ಈ ಬಾಂಬ್‌ ಬೆದರಿಕೆ ಕರೆ ಬಂದೊಡನೆ ವಿಮಾನಯಾನವನ್ನು ತಕ್ಷಣ ರದ್ದುಗೊಳಿಸಬೇಕಾಗುತ್ತದೆ. ರದ್ದು ಅಥವಾ ಸ್ಥಗಿತಗೊಳಿಸಿದರೆ ಅಥವಾ ತುರ್ತು ಭೂಸ್ಪರ್ಶ ಮಾಡಿದರೆ ಒತ್ತಾಯಪೂರ್ವಕವಾಗಿ ನಿಗದಿತವಲ್ಲದ ಏರ್‌ಪೋರ್ಟ್‌ಗಳಲ್ಲಿ ಗಂಟೆಗಟ್ಟಲೇ ವಿಮಾನವನ್ನು ನಿಲ್ಲಿಸಬೇಕಾಗುತ್ತದೆ. ಈ ವೇಳೆ ನಿಗದಿತವಲ್ಲದೇ ಲ್ಯಾಂಡಿಂಗ್‌ ವೆಚ್ಚ, ಪ್ರಯಾಣಿಕರ ವಸತಿ, ಸಿಬ್ಬಂದಿ ಬದಲಾವಣೆ ಹೀಗೆ ಅನೇಕ ರೀತಿಯ ವೆಚ್ಚ ಭರಿಸಬೇಕಾಗುತ್ತದೆ. ಇದನ್ನೆಲ್ಲಾ ಲೆಕ್ಕಾಚಾರ ಮಾಡಿದಾಗ ಒಂದು ವಿಮಾನ ತುರ್ತು ಭೂಸ್ಪರ್ಶ ಮಾಡಿದರೆ ಬರೋಬ್ಬರಿ 3ಕೋಟಿ ರೂ. ನಷ್ಟ ಅನುಭವಿಸುತ್ತದೆ.

ಇತ್ತೀಚಿನ ಘಟನೆಯೊಂದರಲ್ಲಿ, ಸುಮಾರು 130 ಟನ್‌ಗಳಷ್ಟು ಜೆಟ್ ಇಂಧನದೊಂದಿಗೆ ನ್ಯೂಯಾರ್ಕ್‌ಗೆ ಹೊರಟಿದ್ದ ಏರ್ ಇಂಡಿಯಾ ಬೋಯಿಂಗ್ 777 ವಿಮಾನಕ್ಕೆ ಬಾಂಬ್ ಬೆದರಿಕೆ ಸಂದೇಶದ ನಂತರ ಟೇಕ್‌ ಆಫ್‌ ಆದ ಕೆಲವೇ ಗಂಟೆಗಳಲ್ಲಿ ಡೈವರ್ಟ್‌ ಮಾಡಲಾಯಿತು. B777ನ ಗರಿಷ್ಠ ಲ್ಯಾಂಡಿಂಗ್ ತೂಕವು 250 ಟನ್‌ಗಳು. ಈ ರೀತಿಯ ಸಂಪೂರ್ಣ ವಿಮಾನವು ಪ್ರಯಾಣಿಕರು, ಸಾಮಾನುಗಳು ಮತ್ತು ಟೇಕ್‌ಆಫ್‌ನಲ್ಲಿ ಸರಕುಗಳೊಂದಿಗೆ ಸುಮಾರು 340-350 ಟನ್‌ಗಳಷ್ಟು ತೂಗುತ್ತದೆ. ಎರಡು ಗಂಟೆಗಳಲ್ಲಿ ಲ್ಯಾಂಡಿಂಗ್ ಎಂದರೆ ಸುಮಾರು 100 ಟನ್ ಇಂಧನ ವೆಚ್ಚವಾಗಿರುತ್ತದೆ. ಪ್ರತಿ ಟನ್‌ಗೆ ಒಂದು ಲಕ್ಷ ರೂ. ಎಂದು ಅಂದಾಜಿಸಿದರೆ ಇಂಧನ ವ್ಯರ್ಥ ವೆಚ್ಚವು 1ಕೋಟಿ ರೂನಷ್ಟಾಗಿತ್ತು ಎನ್ನಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಅಕ್ಟೋಬರ್ 15 ರಂದು ದೆಹಲಿಯಿಂದ ಚಿಕಾಗೋಗೆ ಏರ್ ಇಂಡಿಯಾ ಬೋಯಿಂಗ್ 777 ಅನ್ನು ಕೆನಡಾದ ದೂರದ ಪಟ್ಟಣವಾದ ಇಕಾಲುಯಿಟ್‌ಗೆ ತಿರುಗಿಸಲಾಯಿತು. ಕೆನಡಾದ ಏರ್ ಫೋರ್ಸ್ A330 ನಲ್ಲಿ ಚಿಕಾಗೋಗೆ ಹಾರುವ ಮೊದಲು 200 ಕ್ಕೂ ಹೆಚ್ಚು ಪ್ರಯಾಣಿಕರು ಮೂರೂವರೆ ದಿನಗಳವರೆಗೆ ಸಿಕ್ಕಿಬಿದ್ದರು, ಪ್ರಯಾಣಿಕರ ಸಂಪೂರ್ಣ ವೆಚ್ಚವನ್ನು ಏರ್‌ ಇಂಡಿಯಾ ಭರಿಸಿದೆ. ವರದಿಗಳ ಪ್ರಕಾರ, ಇಕಾಲುಯಿಟ್‌ನಲ್ಲಿ ಲ್ಯಾಂಡಿಂಗ್‌ ಮಾಡಿದ್ದ B777 ವಿಮಾನಕ್ಕಾಗಿ ಪ್ರತಿ ನಿತ್ಯ AI ಸರಾಸರಿ ದೈನಂದಿನ ಬಾಡಿಗೆಯನ್ನು ಸುಮಾರು 1,429,021ರೂ. ಬಾಡಿಗೆ ಪಾವತಿಸಿದೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:Bomb threat: 2 ದಿನ..10 ವಿಮಾನಗಳಿಗೆ ಬಾಂಬ್‌ ಬೆದರಿಕೆ- ಇಂದು ತುರ್ತು ಸಭೆ ಕರೆದ ವಿಮಾನಯಾನ ಸಚಿವಾಲಯ