Thursday, 21st November 2024

Bomb Threat : ಸ್ಕೂಲ್‌, ವಿಮಾನ, ಹೊಟೇಲ್‌ ಆಯ್ತು..ಈಗ ರೈಲಿಗೂ ಬಂತೂ ಬಾಂಬ್‌ ಬೆದರಿಕೆ! ಭಾರೀ ಆತಂಕ ಸೃಷ್ಟಿ

Bomb Threat 

ಲಖನೌ: ಇತ್ತೀಚೆಗೆ ದೇಶದಲ್ಲಿ ಪದೇ ಪದೇ ಹುಸಿ ಬಾಂಬ್‌ ಬೆದರಿಕೆ (Bomb Threat) ಜಾಸ್ತಿ ಆಗುತ್ತಲೇ ಇದೆ. ಕೆಲವು ದಿನಗಳ ಹಿಂದೆ ವಿಮಾನ ನಿಲ್ದಾಣ (Airport) ಹಾಗೂ ವಿಮಾನಗಳಿಗೆ ಬಾಂಬ್‌ ಬೆದರಿಕೆ ಬಂದಿತ್ತು. ಇದೀಗ ಉತ್ತರ ಪ್ರದೇಶದಲ್ಲಿ ರೈಲಿನಲ್ಲಿ (Railway) ಬಾಂಬ್‌ ಇದೆ ಎಂದು ಬೆದರಿಕೆ ಹಾಕಿದ ಘಟನೆ ವರದಿಯಾಗಿದೆ.

ಉತ್ತರ ಪ್ರದೇಶದ ದರ್ಭಾಂಗ್‌ನಿಂದ ದೆಹಲಿಗೆ ಹೊರಟಿದ್ದ ಬಿಹಾರ್ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್( Bihar Sampark Kranti) ರೈಲಿಗೆ ಬೆದರಿಕೆ ಬಂದಿದ್ದು ಚಲಿಸುತ್ತಿದ್ದ ರೈಲನ್ನು ನಿಲ್ಲಿಸಿ ತಪಾಸಣೆ ನಡೆಸಲಾಗಿದೆ. ಉತ್ತರ ಪ್ರದೇಶದ ಗೊಂಡಾ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲನ್ನು ಕೆಲ ಕಾಲ ನಿಲ್ಲಿಸಿ ಎಲ್ಲಾ ಬೋಗಿ ಹಾಗೂ ಎಂಜಿನ್‌ಗಳನ್ನು ಪರಿಶೀಲನೆ ಮಾಡಲಾಗಿದೆ. ಇದರಿಂದ ಪ್ರಯಾಣಿಕರಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಘಟನೆಯ ಬಗ್ಗೆ ಮಾತನಾಡಿದ ಗೊಂಡಾದ ಇನ್‌ಸ್ಪೆಕ್ಟರ್ ನರೇಂದ್ರ ಪಾಲ್ ಸಿಂಗ್, “ಸರ್ಕಾರಿ ರೈಲ್ವೆ ಪೊಲೀಸ್ (GRP) ಹಾಗೂ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (RPF) ಮತ್ತು ಸ್ಥಳೀಯ ಪೊಲೀಸರು, ರೈಲ್ವೆ ಅಧಿಕಾರಿಗಳು ಮತ್ತು ಮ್ಯಾಜಿಸ್ಟ್ರೇಟ್‌ನ ಸಹಯೋಗದಲ್ಲಿ ಸಂಪೂರ್ಣ ತನಿಖೆ ನಡೆದಿದೆ. ಶ್ವಾನ ದಳದ ತಂಡವು ಪ್ರತಿಯೊಂದು ಮೂಲೆಯಲ್ಲಿಯೂ ಶೋಧ ನಡೆಸಿದೆ. ಬಾಂಬ್ ಬೆದರಿಕೆಯು ಸುಳ್ಳಾಗಿದ್ದು ಯಾರೂ ಆತಂಕ ಪಡಬೇಡಿ” ಎಂದು ಹೇಳಿದ್ದಾರೆ.

ರೈಲನ್ನು ಸುಮಾರು ಎರಡು ಗಂಟೆಗಳ ಕಾಲ ನಿಲ್ಲಿಸಬೇಕಾಗಿದ್ದರಿಂದ ಪ್ರಯಾಣಿಕರಿಗೆ ಗಮನಾರ್ಹ ತೊಂದರೆಯಾಗಿದೆ. ಸಂಪೂರ್ಣ ಪರಿಶೀಲನೆ ನಡೆಸಿದ ಬಳಿಕ ರೈಲು ಸಂಚಾರಕ್ಕಾಗಿ ಅನುವು ಮಾಡಿಕೊಡಲಾಗಿದೆ.ಸದ್ಯ ಪೊಲೀಸರು ಬೆದರಿಕೆ ಹಾಕಿದವರಿಗಾಗಿ ಬಲೆ ಬೀಸಿದ್ದಾರೆ. ಆರೋಪಿಗಾಗಿ ಶೋಧ ನಡೆಯುತ್ತಿದ್ದು, ಕಾರ್ಯಾಚರಣೆಯನ್ನು ಇನ್ನಷ್ಟು ಚುರುಕು ಮಾಡುತ್ತೇವೆ ಎಂದು ಹೇಳಿದ್ದಾರೆ.

ಮುಂಬೈ-ಹೌರಾ ಮೇಲ್ ರೈಲಿಗೆ ಹುಸಿ ಬಾಂಬ್ ಬೆದರಿಕೆ

ಕಳೆದ ವಾರ ಮುಂಬೈ – ಹೌರಾ ರೈಲಿಗೆ ಹುಸಿ ಬಾಂಬ್‌ ಬೆದರಿಕೆ ಬಂದಿದ್ದು, ಕೆಲ ಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಬೆದರಿಕೆ ಹಾಕಿದವರು ಟೈಂ ಬಾಂಬ್‌ ಮೂಲಕ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದರು. ನಂತರ ಇಡೀ ರೈಲನ್ನು ತಪಾಸಣೆ ಮಾಡಲಾಗಿತ್ತಾದರೂ ಯಾವುದೇ ಸ್ಫೋಟಕ ಪತ್ತೆಯಾಗಿರಲಿಲ್ಲ.

ಈ ಸುದ್ದಿಯನ್ನೂ ಓದಿ:Bomb threat: ಪಾಕ್‌ನ ISI ಬೆಂಬಲಿತ ಉಗ್ರರಿಂದ ದೇಗುಲ ಸ್ಫೋಟ… ಇಸ್ಕಾನ್‌ಗೂ ಬಂತು ಬಾಂಬ್‌ ಬೆದರಿಕೆ