ನವದೆಹಲಿ: ನಿನ್ನೆಯಷ್ಟೇ ದೆಹಲಿಯ (Delhi School) ನಾಲ್ಕು ಶಾಲೆಗಳಿಗೆ ಬಾಂಬ್ ಬೆದರಿಕೆ (Bomb Threat) ಬಂದಿದ್ದು, ವಿದ್ಯಾರ್ಥಿಗಳು, ಶಿಕ್ಷಕರು ಆತಂಕಕ್ಕೊಳಗಾಗಿದ್ದರು. ಇದೀಗ ಮತ್ತೊಮ್ಮೆ ಅದೇ ರೀತಿಯಲ್ಲಿ ದುಷ್ಕರ್ಮಿಗಳು ಬಾಂಬ್ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರ್‌ಕೆ ಪುರಂನ ದೆಹಲಿ ಪಬ್ಲಿಕ್ ಸ್ಕೂಲ್ ಮತ್ತು ವಸಂತ್ ಕುಂಜ್‌ನ ರಿಯಾನ್ ಇಂಟರ್‌ನ್ಯಾಶನಲ್ ಸ್ಕೂಲ್ ಸೇರಿದಂತೆ ದೆಹಲಿಯ ಹಲವು ಶಾಲೆಗಳಿಗೆ ಶನಿವಾರ ಮತ್ತೊಮ್ಮೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು ಎಂದು ಪೊಲೀಸರು ಖಚಿತ ಪಡಿಸಿದ್ದಾರೆ. ದೆಹಲಿ ಅಗ್ನಿಶಾಮಕ ಸೇವೆಯ ಅಧಿಕಾರಿಯೊಬ್ಬರು, ಬೆಳಿಗ್ಗೆ 6:09 ಕ್ಕೆ ಬಾಂಬ್ ಬೆದರಿಕೆಯ ಕುರಿತು ಕರೆ ಬಂದಿರುವುದಾಗಿ ಹೇಳಿದ್ದಾರೆ.
ಈಗಾಗಲೇ ದೆಹಲಿ ಪೊಲೀಸರು ಶಾಲೆಗಳ ಸುತ್ತ ಮುತ್ತ ಕಟ್ಟೆಚ್ಚರ ವಹಿಸಿದ್ದು, , ಅಗ್ನಿಶಾಮಕ ದಳ, ಶ್ವಾನ ದಳ ಮತ್ತು ಬಾಂಬ್ ಪತ್ತೆ ತಂಡಗಳು ಶಾಲೆ ಬಳಿ ಆಗಮಿಸಿವೆ. ಶೋಧ ಕಾರ್ಯಾಚರಣೆ ಆರಂಭಿಸಲಾಗಿದ್ದು, ಇಲ್ಲಿಯವರೆಗೆ ಅನುಮಾನಾಸ್ಪದವಾಗಿ ಏನೂ ಪತ್ತೆಯಾಗಿಲ್ಲ ಆದರೆ, ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಮೇಲ್ ಮೂಲಕ ಬೆದರಿಕೆ ಸಂದೇಶ ಕಳುಹಿಸಲಾಗಿದ್ದು, ಅಲ್ಲಾ ನಿಮ್ಮನ್ನು ಗಮನಿಸುತ್ತಿರುತ್ತಾನೆ. ನೀವು ಮಾಡಿದ ತಪ್ಪಿಗೆ ಆತ ಶಿಕ್ಷೆ ನೀಡುತ್ತಾನೆ. ನೀವು ಏನೇ ಮಾಡಿರೂ ಅಲ್ಲಾನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬರೆಯಲಾಗಿದೆ. ಶನಿವಾರ ನಿಮ್ಮ ಶಾಲಾ ಕಟ್ಟಡಗಳಲ್ಲಿ ವಿದ್ಯಾರ್ಥಿಗಳು ಇಲ್ಲದಿರುವಾಗ, ಕಟ್ಟಡವನ್ನು ನೆಲಸಮಗೊಳಿಸಲಾಗುವುದು. ನಮಗೆ ಪ್ರವಾದಿ ಮುಹಮ್ಮದ್ ಆಶೀರ್ವದಿಸಿದ್ದಾರೆ. ನಮ್ಮ ಮಕ್ಕಳು ಅಲ್ಲಾಹನ ಧೈರ್ಯಶಾಲಿ ಸೇವಕರು ಹಾಗೂ ಅವರು ತಮ್ಮ ಗುರಿಯನ್ನು ವಿಫಲಗೊಳಿಸುವುದಿಲ್ಲ ಎಂದು ಬೆದರಿಕೆ ಹಾಕಲಾಗಿದೆ.
2 ದಿನಗಳಲ್ಲಿ 2ನೇ ಬೆದರಿಕೆ
ಕಳೆದ ಕೆಲ ದಿನಗಳಲ್ಲಿ ದೆಹಲಿ ಸ್ಕೂಲ್‌ಗಳಿಗೆ ಎರಡು ಬಾರಿ ಬೆದರಿಕೆ ಹಾಕಲಾಗಿದೆ. ಶುಕ್ರವಾರ ಮುಂಜಾನೆ, ರಾಷ್ಟ್ರ ರಾಜಧಾನಿಯಾದ್ಯಂತ ಕನಿಷ್ಠ 30 ಶಾಲೆಗಳಿಗೆ ಇಮೇಲ್ ಮೂಲಕ ಬೆದರಿಕೆ ಹಾಕಲಾಗಿತ್ತು. ಬೆದರಿಕೆ ಕರೆ ಬಂದ ನಂತರ ಪೋಷಕರು ಭಯಭೀತರಾಗಿದ್ದ ದೃಶ್ಯ ಕಂಡು ಬಂದಿತು. ನಂತರ ಸ್ಥಳಕ್ಕಾಗಮಿಸಿದ ದೆಹಲಿ ಪೊಲೀಸರು, ದೆಹಲಿ ಅಗ್ನಿಶಾಮಕ ಸೇವೆಗಳು (DFS), ಮತ್ತು ಬಾಂಬ್ ಸ್ಕ್ವಾಡ್‌ಗಳ ಸಂಪೂರ್ಣ ಶೋಧನೆ ನಡೆಸಿದ್ದವು. ಆದರೆ ಶಾಲೆಗಳಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿರಲಿಲ್ಲ.
ಈ ಸುದ್ದಿಯನ್ನೂ ಓದಿ : Bomb Threats: ಒಂದೇ ದಿನ 70ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆ