ಹೊಸದಿಲ್ಲಿ: ವಿಮಾನಗಳನ್ನೇ ಗುರಿಯಾಗಿಸಿಕೊಂಡು ಬಾಂಬ್ ಬೆದರಿಕೆ ಹಾಕುವ ಪ್ರವೃತ್ತಿ ಮತ್ತೆ ಹೆಚ್ಚಾಗುತ್ತಿದೆ (Bomb Threat). ಇದಕ್ಕೆ ಇತ್ತೀಚಿನ ಉದಾಹರಣೆ ವಿಸ್ತಾರ ವಿಮಾನ (Vistara flight)ಕ್ಕೆ ಬಂದ ಬಾಂಬ್ ಬೆದರಿಕೆ. ದಿಲ್ಲಿಯಿಂದ ಲಂಡನ್‌ಗೆ ತೆರಳುತ್ತಿದ್ದ ವಿಸ್ತಾರ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಅದನ್ನು ಜರ್ಮನಿಯ ಫ್ರಾಂಕ್‌ಫರ್ಟ್ (Frankfurt airport) ಇಳಿಸಲಾಯಿತು. ʼʼಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ ಮತ್ತು ತಪಾಸಣೆ ನಡೆಸಲಾಗಿದೆ. ಯಾವುದೇ ಸ್ಫೋಟಕ ಪತ್ತೆಯಾಗಿಲ್ಲʼʼ ಎಂದು ವಿಸ್ತಾರ ವಿಮಾನದ ಮೂಲಗಳು ತಿಳಿಸಿವೆ. ಕೂಲಂಕುಷ ಪರಿಶೀಲನೆ ಬಳಿಕ ವಿಮಾನ ಲಂಡನ್‌ಗೆ ತೆರಳಿದೆ.
ʼʼಶುಕ್ರವಾರ (ಅಕ್ಟೋಬರ್ 18) ರಾತ್ರಿ ದಿಲ್ಲಿಯಿಂದ ಲಂಡನ್‌ಗೆ ಹೊರಟಿದ್ದ ವಿಮಾನಕ್ಕೆ ಬೆದರಿಕೆ ಬಂದ ಹಿನ್ನಲೆಯಲ್ಲಿ ತಡರಾತ್ರಿ 12.30ರ ಸುಮಾರಿಗೆ ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು. ಪ್ರಯಾಣಿಕರನ್ನೆಲ್ಲ ಇಳಿಸಿ ತಪಾಸಣೆ ನಡೆಸಲಾಯಿತು. ಈ ವೇಳೆ ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ವಿಮಾನ ಮತ್ತೆ ಲಂಡನ್‌ಗೆ ಪ್ರಯಾಣ ಬೆಳೆಸಿತುʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
#DiversionUpdate: Flight UK17 from Delhi to London (DEL-LHR) has been diverted to Frankfurt (FRA) and is expected to arrive in Frankfurt at 2110 LT ( Local Time). Please stay tuned for further updates.
— Vistara (@airvistara) October 18, 2024
ಆಕಾಸ ಏರ್‌ಗೂ ಬೆದರಿಕೆ
ಈತನ್ಮಧ್ಯೆ ಬೆಂಗಳೂರಿನಿಂದ ಮುಂಬೈಗೆ ಶುಕ್ರವಾರ ತೆರಳಬೇಕಿದ್ದ ಆಕಾಸ ಏರ್‌ನ ಕ್ಯೂಪಿ 1366 (QP 1366) ವಿಮಾನಕ್ಕೂ ಬಾಂಬ್ ಬೆದರಿಕೆ ಬಂದಿತ್ತು. ನಿರ್ಗಮಿಸುವ ಸ್ವಲ್ಪ ಸಮಯದ ಈ ಬೆದರಿಕೆ ಸಂದೇಶ ಬಂದಿತ್ತು ಎಂದು ವಕ್ತಾರರು ತಿಳಿಸಿದ್ದಾರೆ. “ಸುರಕ್ಷತೆ ಮತ್ತು ಭದ್ರತಾ ಕಾರ್ಯವಿಧಾನಗಳ ಪ್ರಕಾರ ಎಲ್ಲ ಪ್ರಯಾಣಿಕರನ್ನು ವಿಮಾನದಿಂದ ಇಳಿಸಿ ತಪಾಸಣೆ ನಡೆಸಲಾಯಿತು” ಎಂದು ಅಕಾಸ ಏರ್ ಎಕ್ಸ್‌ನಲ್ಲಿ ತಿಳಿಸಿದೆ.
40ಕ್ಕೂ ಹೆಚ್ಚು ವಿಮಾನಗಳಿಗೆ ಬೆದರಿಕೆ
ಕಳೆದ ಕೆಲವು ದಿನಗಳಲ್ಲಿ ಭಾರತದ ಸುಮಾರು 40 ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆಗಳು ಬಂದಿರುವುದು ಕಳವಳವನ್ನುಂಟು ಮಾಡಿದೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ”ವಿಮಾನಗಳಲ್ಲಿ ಬಾಂಬ್‌ಗಳ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಬೆದರಿಕೆಗಳನ್ನು ಪೋಸ್ಟ್ ಮಾಡುತ್ತಿದ್ದ ಹಲವಾರು ಖಾತೆಗಳನ್ನು ನಾವು ಗುರುತಿಸಿದ್ದೇವೆ ಮತ್ತು ಅಮಾನತುಗೊಳಿಸಿದ್ದೇವೆ. ಲಂಡನ್ ಮತ್ತು ಇತರ ದೇಶಗಳಿಂದ ಕೆಲವು ಬೆದರಿಕೆಗಳು ಬಂದಿವೆ” ಎಂದು ತಿಳಿಸಿದ್ದಾರೆ. ”ನಾವು ಎಲ್ಲ ಕರೆಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಮತ್ತು ಅದರ ಹಿಂದೆ ಇರುವ ವ್ಯಕ್ತಿಗಳನ್ನು ಗುರುತಿಸಲು ಬೆದರಿಕೆಯ ಬಗ್ಗೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.
ವಿಮಾನಯಾನ ಸಂಸ್ಥೆಗಳಿಗೆ ಹುಸಿ ಬಾಂಬ್ ಬೆದರಿಕೆಗಳ ಘಟನೆಗಳನ್ನು ತಡೆಗಟ್ಟಲು ಕಠಿಣ ನಿಯಮಗಳನ್ನು ಜಾರಿಗೆ ತರಲು ನಾಗರಿಕ ವಿಮಾನಯಾನ ಸಚಿವಾಲಯ ಯೋಜನೆ ರೂಪಿಸಿದೆ. ʼʼಕಠಿಣ ಕ್ರಮವನ್ನು ಖಚಿತಪಡಿಸಿಕೊಳ್ಳಲು ನಿಯಮಗಳನ್ನು ತಿದ್ದುಪಡಿ ಮಾಡಲು ಚಿಂತನೆ ನಡೆಸಲಾಗುತ್ತಿದೆʼʼ ಎಂದು ನಾಗರಿಕ ವಿಮಾನಯಾನ ಸಚಿವ ಕೆ.ರಾಮ್ ಮೋಹನ್ ನಾಯ್ಡು ಹೇಳಿದ್ದಾರೆ.
ʼʼಈ ವಾರ ಅನೇಕ ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆಗಳನ್ನು ನೀಡಿದ ಸುಮಾರು 10 ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸೈಬರ್ ಭದ್ರತಾ ಸಂಸ್ಥೆಗಳು ಗುರುತಿಸಿ ಬ್ಲಾಕ್ ಮಾಡಿವೆʼʼ ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿಯನ್ನೂ ಓದಿ: Bomb scare : ಮಂಗಳವಾರ ಒಂದೇ ದಿನ ನಾಲ್ಕು ವಿಮಾನಗಳಿಗೆ ಬಾಂಬ್ ಬೆದರಿಕೆ!