ಹೊಸದಿಲ್ಲಿ: ವಿಮಾನಗಳಿಗೆ ರವಾನೆಯಾಗುತ್ತಿರುವ ಹುಸಿ ಬಾಂಬ್ ಬೆದರಿಕೆ (Bomb Threats) ಪ್ರಮಾಣ ತಗ್ಗುತ್ತಲೇ ಇಲ್ಲ. ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ ಕುರಿತು ಎಚ್ಚರಿಕೆ ನೀಡಿದರೂ ಈ ಪ್ರವೃತ್ತಿಗೆ ಬ್ರೇಕ್ ಹಾಕಲು ಸಾಧ್ಯವಾಗುತ್ತಿಲ್ಲ. ದಿನದಿಂದ ದಿನಕ್ಕೆ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಗುರುವಾರ (ಅಕ್ಟೋಬರ್ 24) ಒಂದೇ ದಿನ ದೇಶದ 70ಕ್ಕೂ ಹೆಚ್ಚು ವಿಮಾನಗಳಿಗೆ ಬೆದರಿಕೆ ಸಂದೇಶ ಬಂದಿದೆ. ಏರ್ ಇಂಡಿಯಾ, ವಿಸ್ತಾರಾ ಮತ್ತು ಇಂಡಿಗೋ ವಿಮಾನ ಯಾನ ಸಂಸ್ಥೆಗಳಿಗೆ ತಲಾ 20 ಬೆದರಿಕೆ ಬಂದರೆ, ಆಕಾಸ ಏರ್ 14ಕ್ಕಿಂತ ಹೆಚ್ಚು ಬೆದರಿಕೆಯನ್ನು ಎದುರಿಸಿದೆ ಎಂದು ಪಿಟಿಐ ಸುದ್ದಿಸಂಸ್ಥೆ ತಿಳಿಸಿದೆ.
ಇಂಡಿಗೋ ಏರ್ಲೈನ್ನ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳಿಗೆ 20ರಷ್ಟು ಸಂದೇಶ ಬಂದಿದೆ. ʼʼಎಲ್ಲ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಅಗತ್ಯ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದೇವೆʼʼ ಎಂದು ಇಂಡಿಗೋ ಏರ್ಲೈನ್ ತಿಳಿಸಿದೆ.
A total of 20 domestic and international flights of IndiGo Airlines received a security-related alert today.
— ANI (@ANI) October 24, 2024
The airline company said, "All customers were safely disembarked. We worked closely with the relevant authorities, and standard operating procedures were followed." pic.twitter.com/Hrxorp9CSZ
ಅಕಾಸ ಏರ್ನ ವಕ್ತಾರರು ಮಾತನಾಡಿ ತಮ್ಮ ಕೆಲವು ವಿಮಾನಗಳು ಭದ್ರತಾ ಎಚ್ಚರಿಕೆಗಳನ್ನು ಸ್ವೀಕರಿಸಿವೆ ಎನ್ನುವುದನ್ನು ದೃಢಪಡಿಸಿದ್ದಾರೆ. “ನಮ್ಮ ತುರ್ತು ಪ್ರತಿಕ್ರಿಯೆ ತಂಡಗಳು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿವೆ ಮತ್ತು ಭದ್ರತಾ ಹಾಗೂ ನಿಯಂತ್ರಕ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿವೆ. ಸ್ಥಳೀಯ ಅಧಿಕಾರಿಗಳ ಸಮನ್ವಯದೊಂದಿಗೆ ನಾವು ಎಲ್ಲ ಸುರಕ್ಷತಾ ಮತ್ತು ಭದ್ರತಾ ಕಾರ್ಯವಿಧಾನಗಳನ್ನು ಅನುಸರಿಸುತ್ತಿದ್ದೇವೆ” ಎಂದು ಮಾಹಿತಿ ನೀಡಿದ್ದಾರೆ.
ಎಚ್ಚರಿಕೆ ನೀಡಿದ ಕೇಂದ್ರ
ಪ್ರಯಾಣಿಕ ವಿಮಾನಗಳಿಗೆ ಬಾಂಬ್ ಬೆದರಿಕೆ ಒಡ್ಡುವವರಿಗೆ ವಿಮಾನ ಪ್ರಯಾಣ ನಿರ್ಬಂಧಿಸಲು ಕಾಯ್ದೆಗೆ ತಿದ್ದುಪಡಿ ತರುವುದಾಗಿ ನಾಗರಿಕ ವಿಮಾನಯಾನ ಸಚಿವ ಕೆ.ರಾಮ ಮೋಹನ್ ನಾಯ್ಡು ಸೋಮವಾರ (ಅಕ್ಟೋಬರ್ 21) ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಕೇಂದ್ರ ಗೃಹ ಸಚಿವಾಲಯದ ಜತೆ ವಿಮಾನ ಯಾನ ಸುರಕ್ಷತೆ ಬ್ಯುರೋ ಸಂಪರ್ಕದಲ್ಲಿದೆ ಎಂದು ತಿಳಿಸಿದ್ದಾರೆ. ಅಕ್ಟೋಬರ್ 14ರಿಂದ ಈವರೆಗೆ ನಿರಂತರ ಬಾಂಬ್ ಬೆದರಿಕೆಯ ಹುಸಿ ಕರೆಗಳು ಬಂದಿವೆ. ಇದರಿಂದ ಸಾವಿರಾರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದ್ದಾರೆ.
ಹುಸಿ ಬೆದರಿಕೆಯಾದರೂ ಇವನ್ನು ಲಘುವಾಗಿ ಪರಿಗಣಿಸಿಲ್ಲ. ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ. ಬಾಂಬ್ ಬೆದರಿಕೆ ಹಾಕುವ ದುಷ್ಕರ್ಮಿಗಳಿಗೆ ವಿಮಾನಯಾನ ನಿರ್ಬಂಧಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಕಳೆದ 8 ದಿನಗಳಲ್ಲಿ 150ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆ ಬಂದಿದೆ. ಬುಧವಾರ ಕೇಂದ್ರ ಸರ್ಕಾರ ಹುಸಿ ಬಾಂಬ್ ಸಂದೇಶ ಬರುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್ಗೆ ಎಚ್ಚರಿಕೆ ನೀಡಿದೆ. ಮುಖ್ಯವಾಗಿ ಆಕಾಸ ಏರ್, ಏರ್ ಇಂಡಿಯಾ, ಇಂಡಿಗೋ ಮತ್ತು ವಿಸ್ತಾರಾ ವಿಮಾನ ಸಂಸ್ಥೆಗಳ ಸಂಚಾರ ವ್ಯವಸ್ಥೆಗೆ ಬೆದರಿಕೆ ಸಂದೇಶ ಬಾಧಿಸಿದೆ. ಸೈಬರ್ ಸೆಕ್ಯುರಿಟಿ ಏಜೆನ್ಸಿ ಸಾಮಾಜಿಕ ಜಾಲತಾಣದ 10ಕ್ಕೂ ಇಂತಹ ಅಕೌಂಟ್ಗಳನ್ನು ಬ್ಲಾಕ್ ಮಾಡಿದೆ. ಅದರಲ್ಲಿಯೂ ಎಕ್ಸ್ನ ಖಾತೆಗಳು ಹೆಚ್ಚಿನ ಸಂಖ್ಯೆಯಲ್ಲಿದೆ.
ಈ ಸುದ್ದಿಯನ್ನೂ ಓದಿ: Bomb threats : ವಿಮಾನಗಳಿಗೆ ಬಾಂಬ್ ಬೆದರಿಕೆ ಹಾಕಿದರೆ ವಿಚಾರಣೆಯಿಲ್ಲದೆ ಕಠಿಣ ಶಿಕ್ಷೆ; ಅಧಿಕಾರಿಗಳ ಎಚ್ಚರಿಕೆ