Friday, 22nd November 2024

Tirupati Hotels : ತಿರುಪತಿಯ 3 ಹೋಟೆಲ್‌ಗಳಿಗೆ ಇ-ಮೇಲ್ ಮೂಲಕ ಬಾಂಬ್‌ ಬೆದರಿಕೆ

ತಿರುಪತಿ: ಆಂಧ್ರಪ್ರದೇಶದ ವಿಶ್ವ ಪ್ರಸಿದ್ಧ ಬಾಲಾಜಿ ದೇವಸ್ಥಾನವಿರುವ ಪಟ್ಟಣ ತಿರುಪತಿಯ ಮೂರು ಖಾಸಗಿ ಹೋಟೆಲ್‌ಗಳಿಗೆ (Tirupati Hotels) ಬಾಂಬ್ ಬೆದರಿಕೆ ಬಂದಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಬೆದರಿಕೆಗಳನ್ನು ಪೊಲೀಸರಿಗೆ ವರದಿ ಮಾಡಿದ ಬಳಿಕ ಅವರು ಸ್ನಿಫರ್ ನಾಯಿಗಳೊಂದಿಗೆ ಹೋಟೆಲ್‌ಗೆ ಬಂದು ಶೋಧ ನಡೆಸಿದ್ದಾರೆ. ಈ ವೇಳೆ ಏನೂ ಕಂಡುಬಂದಿಲ್ಲ. ಬೆದರಿಕೆಗಳು ಹುಸಿ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಲೀಲಾ ಮಹಲ್, ಕಪಿಲಾ ತೀರ್ಥಂ ಮತ್ತು ಅಲಿಪಿರಿ ಪ್ರದೇಶಗಳಲ್ಲಿ ಹೋಟೆಲ್‌ಗಳಿಗೆ ಬೆದರಿಕೆಗಳು ಬಂದಿವೆ. ಬೆದರಿಕೆಗಳ ಮೂಲ ಕಂಡುಹಿಡಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇಮೇಲ್‌ಗಳಲ್ಲಿ ಈ ರೀತಿ ಬರೆಯಲಾಗಿತ್ತು. “ಇಲ್ಲಿರುವ ಹೋಟೆಲ್‌ಗಳಲ್ಲಿ ಸುಧಾರಿತ ಸ್ಪೋಟಕಗಳನ್ನು ಸಕ್ರಿಯಗೊಳಿಸಲು ಪಾಕಿಸ್ತಾನ ಐಎಸ್ಐ ಸಜ್ಜಾಗಿದೆ. ರಾತ್ರಿ 11 ಗಂಟೆಯೊಳಗೆ ಅದು ಸ್ಫೋಟಗೊಳ್ಳಲಿದೆ ಎಂದು ಬರೆದಿತ್ತು.

ವಿಮಾನಯಾನ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಮುಂದುವರಿಕೆ

ಅಕ್ಟೋಬರ್ 24 ರಂದು ಭಾರತದ ವಿಮಾನಯಾನ ಸಂಸ್ಥೆಗಳು ಸುಮಾರು 70 ಹೊಸ ಬಾಂಬ್ ಬೆದರಿಕೆಗಳನ್ನು ವರದಿ ಮಾಡಿವೆ. ಇದು ಏರ್ ಇಂಡಿಯಾ, ವಿಸ್ತಾರಾ, ಅಕಾಸಾ ಏರ್ ಮತ್ತು ಇಂಡಿಗೊದಂತಹ ಪ್ರಮುಖ ಕಂಪನಿಗಳ ಮೇಲೆ ಪರಿಣಾಮ ಬೀರಿದೆ.

ಇದನ್ನೂ ಓದಿ: Hoax Bomb Threats: ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ; ಭದ್ರತಾ ನಿಯಮ ಬಿಗಿಗೊಳಿಸಲು ಸರ್ಕಾರದ ಚಿಂತನೆ

ಏರ್ ಇಂಡಿಯಾ, ವಿಸ್ತಾರಾ ಮತ್ತು ಇಂಡಿಗೊದ ತಲಾ 20 ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಿದ್ದರೆ, ಅಕಾಸಾ ಏರ್‌ನ ಸುಮಾರು 14 ವಿಮಾನಗಳಿಗೆ ಬೆದರಿಕೆ ಬಂದಿದೆ ಎಂದು ವರದಿ ತಿಳಿಸಿದೆ. ವಿಶೇಷವೆಂದರೆ, ಕಳೆದ 11 ದಿನಗಳಲ್ಲಿ, ಭಾರತೀಯ ವಾಹಕಗಳು ನಿರ್ವಹಿಸುವ ಸುಮಾರು 250 ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಿವೆ.

ಕೆಲವು ಏರ್ ಇಂಡಿಯಾ ವಿಮಾನಗಳು 2024 ರ ಅಕ್ಟೋಬರ್ 24 ರಂದು ಸಾಮಾಜಿಕ ಮಾಧ್ಯಮದಲ್ಲಿ ಸ್ವೀಕರಿಸಿದ ಭದ್ರತಾ ಬೆದರಿಕೆಗಳಿಗೆ ಒಳಪಟ್ಟಿದ್ದವು. ನಿಗದಿಪಡಿಸಿದ ಪ್ರೋಟೋಕಾಲ್‌ಗಳನ್ನು ಅನುಸರಿಸಿ, ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ನಮ್ಮ ಪ್ರಯಾಣಿಕರು, ಸಿಬ್ಬಂದಿ ಮತ್ತು ವಿಮಾನದ ಸುರಕ್ಷತೆ ಮತ್ತು ಭದ್ರತೆ ನಮ್ಮ ಮೊದಲ ಆದ್ಯತೆ ಎಂದು ಏರ್ ಇಂಡಿಯಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಂದು ಕಾರ್ಯನಿರ್ವಹಿಸುತ್ತಿರುವ ತನ್ನ ಕೆಲವು ವಿಮಾನಗಳು ಭದ್ರತಾ ಎಚ್ಚರಿಕೆಗಳನ್ನು ಸ್ವೀಕರಿಸಿವೆ ಎಂದು ಅಕಾಸಾ ಏರ್ ವಕ್ತಾರರು ವರದಿ ಮಾಡಿದ್ದಾರೆ