Friday, 22nd November 2024

ನವದೆಹಲಿಯಲ್ಲಿ ಹಕ್ಕಿ ಜ್ವರಕ್ಕೆ ಮೊದಲ ಬಲಿ, ಏಮ್ಸ್​ನಲ್ಲಿ ಬಾಲಕನ ಸಾವು

ನವದೆಹಲಿ: ಕರೋನಾ ಸೋಂಕಿನಿಂದ ಇನ್ನೂ ಈಗೀಗ ಜನ ಸುಧಾರಿಸಿಕೊಳ್ಳುತ್ತಿದ್ದಾರೆ. ಆಗಲೇ ಆತಂಕ ಹುಟ್ಟಿಸಿರುವ ಹಕ್ಕಿ ಜ್ವರಕ್ಕೆ ದೇಶದಲ್ಲಿ ಮೊದಲ ಬಲಿಯಾಗಿದೆ.

ದೆಹಲಿಯ ಏಮ್ಸ್​ನಲ್ಲಿ ಹಕ್ಕಿ ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದ 11 ವರ್ಷದ ಬಾಲಕನೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಇದು ಹಕ್ಕಿ ಜ್ವರದಿಂದ ಮೃತಪಟ್ಟ ಮೊದಲ ಪ್ರಕರಣವಾಗಿದೆ. ಏಮ್ಸ್​ನ ಮಕ್ಕಳ ವಿಭಾಗದಲ್ಲಿ ಅಡ್ಮಿಟ್ ಆಗಿದ್ದ ಬಾಲಕನಿಗೆ ಕಳೆದ ಕೆಲವು ದಿನಗಳಿಂದಲೂ H5N1 (ಹಕ್ಕಿಜ್ವರ)ಕ್ಕೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಬಾಲಕನ ಸಂಪರ್ಕಕ್ಕೆ ಬಂದ ದೆಹಲಿ ಏಮ್ಸ್​​ನ ಎಲ್ಲ ಸಿಬ್ಬಂದಿಯೂ ಐಸೋಲೇಶನ್​ನಲ್ಲಿ ಇದ್ದಾರೆ. ಏಮ್ಸ್​ ವೈದ್ಯರು, ಈ ಬಾಲಕನಿಗೆ ಲ್ಯುಕೋಮಿಯಾ ಮತ್ತು ನ್ಯುಮೋನಿಯಾ ಕೂಡ ಇತ್ತು. ಹಕ್ಕಿ ಜ್ವರ ಕಾಣಿಸಿಕೊಂಡ ಬಳಿಕ ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು ಎಂದಿದ್ದಾರೆ.

ಈ ವರ್ಷದ ಪ್ರಾರಂಭದಲ್ಲಿ ದೇಶಾದ್ಯಂತ ಹಲವು ಕಡೆಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿತ್ತು. ದೆಹಲಿ, ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಗುಜರಾತ್​, ಮಹಾರಾಷ್ಟ್ರ, ಹರ್ಯಾಣಗಳಲ್ಲಿ ಹಕ್ಕಿ ಜ್ವರದಿಂದ ಅನೇಕ ಪಕ್ಷಿಗಳು ಮೃತಪಟ್ಟಿವೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎಚ್ಚರಿಕೆಯನ್ನೂ ನೀಡಿತ್ತು.

ಹಕ್ಕಿ ಜ್ವರಕ್ಕೆ ಏವಿಯನ್​ ಇನ್​ಫ್ಲ್ಯೂಯೆಂಜಾ, H5N1 ಎಂದೂ ಕರೆಯುತ್ತಾರೆ. ಹಕ್ಕಿ ಜ್ವರ ಮನುಷ್ಯನಿಗೆ ತಗುಲುವುದು ತೀರ ಅಪರೂಪ. ಹಕ್ಕಿಗಳ ಸಂಪರ್ಕಕ್ಕೆ ಬರುವ ಇತರ ಪ್ರಾಣಿಗಳು ಮತ್ತು ಮನುಷ್ಯರಿಗೆ ಈ ಸೋಂಕು ಹರಡುತ್ತದೆ. ಇದು ಸಾಂಕ್ರಾಮಿಕವಾಗಿರುವುದರಿಂದ ಜನ ಸಹಜವಾಗಿಯೇ ಹೆಚ್ಚು ಆತಂಕಕ್ಕೆ ಒಳಗಾಗುತ್ತಾರೆ. ಆದರೆ ಸೂಕ್ತ ಮುತುವರ್ಜಿ ವಹಿಸಿದರೆ ಪ್ರಾಣಾಪಾಯ ಉಂಟಾಗದಂತೆ ತಡೆಯಬಹುದಾಗಿದೆ.