Friday, 22nd November 2024

 BRICS Summit: ಸಂಘರ್ಷಗಳ ಪರಿಹಾರಕ್ಕೆ ಯುದ್ಧ ನೆಚ್ಚಿಕೊಳ್ಳಬೇಡಿ : ಬ್ರಿಕ್ಸ್‌ ಸದಸ್ಯರಿಗೆ ಮೋದಿ ಸಲಹೆ

 BRICS Summit

ಮಾಸ್ಕೋ: ರಷ್ಯಾ ಹಾಗೂ ಉಕ್ರೇನ್‌ನಲ್ಲಿ(russia ukraine war) ನಡೆಯುತ್ತಿರುವ ಸಂಘರ್ಷದ ಬಗ್ಗೆ ರಾಜತಾಂತ್ರಿಕತೆ ( Diplomacy) ಮತ್ತು ಮಾತುಕತೆಯ ಮೂಲಕ ಶಾಂತಿಯುತವಾಗಿ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ (Narendra modi) ಬುಧವಾರ ಕರೆ ನೀಡಿದರು. ರಷ್ಯಾದ ಕಜಾನ್‌ನಲ್ಲಿ ನಡೆಯುತ್ತಿರುವ 16 ನೇ ಶೃಂಗಸಭೆಯನ್ನು( BRICS Summit) ಉದ್ಧೇಶಿಸಿ ಮಾತನಾಡಿದ ಅವರು ಸಭೆ ಆಯೋಜನೆ ಮಾಡಿದ ರಷ್ಯಾದ ಅಧ್ಯಕ್ಷ ಪುಟಿನ್‌ಗೆ ಅಭಿನಂದನೆ ತಿಳಿಸಿದರು. “ನಾವು ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತೇವೆ, ಯುದ್ಧವನ್ನಲ್ಲ” ಎಂದು ಅಭಿಪ್ರಾಯಪಟ್ಟರು.

ಕೋವಿಡ್‌ನಂತಹ ಸವಾಲುಗಳನ್ನು ನಾವು ಒಟ್ಟಾಗಿ ಜಯಿಸಿದ್ದೇವೆ. ಮುಂದಿನ ಪೀಳಿಗೆಯ ಸುರಕ್ಷಿತ, ಸಶಕ್ತ ಮತ್ತು ಸಮೃದ್ಧ ಭವಿಷ್ಯಕ್ಕಾಗಿ ಹೊಸ ಅವಕಾಶಗಳನ್ನು ಸೃಷ್ಟಿಸಲು ನಾವು ಸಂಪೂರ್ಣವಾಗಿ ಸಮರ್ಥರಿದ್ದೇವೆ ಎಂದರು. ಭಯೋತ್ಪಾದನೆ ವಿರುದ್ಧ ಜಾಗತಿಕ ಏಕತೆಗೆ ಕರೆ ನೀಡಿದ ಪ್ರಧಾನಿ ಇಂತಹ ಗಂಭೀರ ವಿಷಯಗಳಲ್ಲಿ ದ್ವಂದ್ವ ನಿಲುವಿಗೆ ಅವಕಾಶವಿಲ್ಲ ಎಂದು ಹೇಳಿದರು.

ಜಗತ್ತಿನಲ್ಲಿ ಯುದ್ಧದ ಹೊರತಾಗಿಯೂ ಚರ್ಚಿಸಲು ಅನೇಕ ಗಂಭೀರ ವಿಷಯಗಳಿವೆ. ಜಗತ್ತಿನಲ್ಲಿ ಹಣದುಬ್ಬರ ಹೆಚ್ಚಾಗಿದೆ. ಆರೋಗ್ಯ , ಇಂಧನ, ಮೂಲಭೂತ ಸೌರ್ಕಯಗಳ ಕುರಿತು ನಾವು ಚರ್ಚಿಸಬೇಕು. ಸೈಬರ್‌ ‌ಕ್ರೈಂನಂತಹ ಹೊಸ ಸವಾಲುಗಳು ನಮ್ಮೆದುರಿವೆ. ಅವುಗಳನ್ನು ಒಟ್ಟಾಗಿ ಎದುರಿಸಬೇಕು. ಬ್ರಿಕ್ಸ್‌ನ ಸದಸ್ಯ ರಾಷ್ಟ್ರಗಳು ಶಾಂತಿ ಕಾಪಾಡಬೇಕೆ ವಿನಃ ಯುದ್ಧ ಬೆಂಬಲಿಸಬಾರದು”ಎಂದು ಹೇಳಿದರು.

ಇದನ್ನೂ ಓದಿ 12 ನೇ ಬ್ರಿಕ್ಸ್ ಶೃಂಗಸಭೆ ಇಂದು: ಒಂದೇ ವೇದಿಕೆಯಲ್ಲಿ ಮೋದಿ-ಶೀ ಜಿನ್ ಪಿಂಗ್

 ಕೃಷ್ಣ ಭಜನೆಯ ಸ್ವಾಗತ

ಬ್ರಿಕ್ಸ್​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯನ್ನರು ವಿಶೇಷವಾಗಿ ಸ್ವಾಗತ ಕೋರಿದ್ದರು ರಷ್ಯನ್ನರು ಭಾರತೀಯ ಉಡುಗೆಯಲ್ಲಿ ನೃತ್ಯ ಮಾಡಿದ್ದು ಎಲ್ಲರ ಗಮನ ಸೆಳೆಯಿತು. ನಂತರ ಮೋದಿಯವರನ್ನು ತಬ್ಬಿಕೊಂಡು ಬರಮಾಡಿಕೊಂಡ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಮೋದಿ ಕೆಲಕಾಲ ಮಾತುಕತೆ ನಡೆಸಿದ್ದಾರೆ.

ಈ ವೇಳೆ ಮಾತನಾಡಿದ ಮೋದಿ ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದಂತೆ ನಾನು ನಿಮ್ಮೊಂದಿಗೆ ನಿರಂತರ ಸಂವಹನವನ್ನು ನಿರ್ವಹಿಸಿದ್ದೇನೆ. ನಾನು ಮೊದಲೇ ಹೇಳಿದಂತೆ ಸಮಸ್ಯೆಗಳನ್ನು ಶಾಂತಿಯುತವಾಗಿ ಪರಿಹರಿಸುವುದರ ಬಗ್ಗೆ ನಮಗೆ ನಂಬಿಕೆಯಿದೆ. ಮಾನವೀಯ ಪ್ರಯತ್ನಗಳಿಗೆ ಆದ್ಯತೆ ನೀಡುವ ಮೂಲಕ ಶಾಂತಿ ಮತ್ತು ಸ್ಥಿರತೆಯ ಸ್ಥಾಪನೆಯನ್ನು ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಭವಿಷ್ಯದಲ್ಲಿ ಅದಕ್ಕೆ ಸಾಧ್ಯವಿರುವ ಎಲ್ಲ ಸಹಕಾರವನ್ನು ನೀಡಲು ಭಾರತ ಸಿದ್ಧವಿದೆ “ಎಂದು ಪುಟಿನ್​ಗೆ ಹೇಳಿದ್ದಾರೆ.