ಹೈದರಾಬಾದ್: ತೆಲಂಗಾಣದ ಕೊಮಾರಂ ಭೀಮ್ ಆಸಿಫಾಬಾದ್ ಜಿಲ್ಲೆಯ ಕಾಗಜ್‌ನಗರ ಪಟ್ಟಣದಲ್ಲಿ ಭಾರತ್ ರಾಷ್ಟ್ರ ಸಮಿತಿ ಮತ್ತು ಬಹುಜನ ಸಮಾಜ ಪಕ್ಷ ಬೆಂಬಲಿಗರ ನಡುವೆ ಘರ್ಷಣೆ ಉಂಟಾಗಿದೆ.
ಬಿಎಸ್ಪಿ ರಾಜ್ಯಾಧ್ಯಕ್ಷ ಆರ್.ಎಸ್. ಪ್ರವೀಣ್ ಕುಮಾರ್ ಭಾಗವಹಿಸಿದ್ದ ಚುನಾವಣಾ ಸಭೆಗೆ ಆಡಳಿತ ಪಕ್ಷದ ಬೆಂಬಲಿಗರು ಅಡ್ಡಿಪಡಿಸಿದ ವೇಳೆ ಗಲಾಟೆ ಶುರುವಾಗಿತ್ತು. ಸಾರ್ವಜನಿಕ ಸಭೆ ನಡೆಸುತ್ತಿದ್ದ ಸ್ಥಳಕ್ಕೆ ಬಂದಿದ್ದ ಬಿಎಸ್‌ಪಿ ಪ್ರಚಾರ ವಾಹನದಿಂದ ಭಾರಿ ಧ್ವನಿಯಲ್ಲಿ ಹಾಡುಗಳನ್ನು ಕೇಳಿಸುತ್ತಿತ್ತು ಎಂದು ಬಿಎಸ್‌ಪಿ ಮುಖಂಡರು ಆರೋಪಿಸಿದ್ದಾರೆ. ಇದು ಎರಡೂ ಗುಂಪುಗಳ ನಡುವೆ ಘರ್ಷಣೆಗೆ ಕಾರಣವಾಯಿತು. ಈ ವೇಳೆ ಗುಂಪುಗಳನ್ನು ಚದುರಿ ಸಲು ಪೊಲೀಸರು ಮಧ್ಯಪ್ರವೇಶಿಸಿದರು.
”ತಮ್ಮ ಮನವಿಯ ಹೊರತಾಗಿಯೂ ಬಿಆರ್‌ಎಸ್ ಕಾರ್ಯಕರ್ತರು ಹಾಡಿನ ಸೌಂಡ್ ಅನ್ನು ಕಡಿಮೆ ಮಾಡಲು ನಿರಾಕರಿಸಿದರು” ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಆರೋಪ ಮಾಡಿದ್ದಾರೆ.
ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಮಾಜಿ ಅಧಿಕಾರಿ ಪ್ರವೀಣ್ ಕುಮಾರ್ ಅವರು ಚುನಾವಣೆಯಲ್ಲಿ ಸಿರ್ಪುರ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಕುಮಾರ್ ರಾಜಕೀಯ ಪ್ರವೇಶಿಸಲು 2021ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದರು. ಅವರು ಬಿಎಸ್ಪಿಗೆ ಸೇರಿ ರಾಜ್ಯಾಧ್ಯಕ್ಷರಾದರು. ಬಿಎಸ್‌ಪಿ ಎಲ್ಲಾ 119 ವಿಧಾನಸಭೆ ಕ್ಷೇತ್ರಗಳಲ್ಲೂ ಸ್ಪರ್ಧಿಸುತ್ತಿದೆ.