Saturday, 14th December 2024

ಮತದಾನ ಮಾಡದಂತೆ ಗಡಿ ಗ್ರಾಮಗಳಲ್ಲಿ BSF ಬೆದರಿಕೆ

ಕೂಚ್‌ ಬೆಹಾರ್: ಪಂಚಾಯತ್‌ ಚುನಾವಣೆಯಲ್ಲಿ ಮತದಾನ ಮಾಡದಂತೆ ಗಡಿ ಗ್ರಾಮಗಳಲ್ಲಿ ಗಡಿ ಭದ್ರತಾ ಪಡೆ (BSF) ಜನರಿಗೆ ಬೆದರಿಕೆ ಒಡ್ಡುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಅಲ್ಲದೆ ಈ ಬಗ್ಗೆ ನಿಗಾ ವಹಿಸಬೇಕು ಎಂದು ರಾಜ್ಯ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

‘ಗಡಿ ಗ್ರಾಮಗಳಲ್ಲಿ ಬಿಎಸ್‌ಎಫ್‌ ಯೋಧರು ಮನೆಗೆ ತೆರಳಿ ಮತದಾನ ಮಾಡದಂತೆ ಜನರಿಗೆ ಬೆದರಿಕೆ ಒಡ್ಡುವ ಬಗ್ಗೆ ಮಾಹಿತಿ ಇದೆ. ಜನರು ಯಾವುದೇ ಕಾರಣಕ್ಕೂ ಭಯಪಡದೆ ಚುನಾವಣೆ ಯಲ್ಲಿ ಪಾಲ್ಗೊಳ್ಳಬೇಕು ಎಂದು ನಾನು ಮನವಿ ಮಾಡುತ್ತೇನೆ’ ಎಂದು ಹೇಳಿದ್ದಾರೆ.

ಪಂಚಾಯತ್‌ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಕಾನೂನು ಸುವ್ಯವಸ್ಥೆ ರಾಜ್ಯ ಪಟ್ಟಿ. ಕೇಂದ್ರ ಸರ್ಕಾರಕ್ಕೆ ಇದರಲ್ಲಿ ಯಾವುದೇ ಪಾತ್ರ ಇಲ್ಲ’ ಎಂದು ಹೇಳಿದರು.

ಜುಲೈ 8ರಂದು ನಡೆಯುವ ಚುನಾವಣೆಯಲ್ಲಿ ಟಿಎಂಸಿ ಬಿಜೆಪಿಯನ್ನು ಸೋಲಿಸಲಿದೆ. ಕೇಂದ್ರದಲ್ಲೂ ಬಿಜೆಪಿಯನ್ನು ಸೋಲಿಸಿ ದೇಶದಲ್ಲಿ ಅಭಿವೃದ್ಧಿ ಪರ ಸರ್ಕಾರವನ್ನು ಅಧಿಕಾರಕ್ಕೆ ತರುತ್ತೇವೆ’ ಎಂದು ಹೇಳಿದ್ದಾರೆ.