Wednesday, 30th October 2024

BTR elephants case: ಬಾಂಧವಗಢ ಹುಲಿ ಸಂರಕ್ಷಣಾ ಪ್ರದೇಶದಲ್ಲಿ ಏಳು ಆನೆಗಳ ಸಾವು; ವಿಷ ಪ್ರಾಶನದ ಶಂಕೆ

BTR elephants case

ಭೋಪಾಲ್‌ : ಮಧ್ಯಪ್ರದೇಶದ (Madhya Pradesh) ಉಮಾರಿಯಾ ಜಿಲ್ಲೆಯ ಬಾಂಧವಗಢ ಹುಲಿ ಸಂರಕ್ಷಣಾ ಪ್ರದೇಶದಲ್ಲಿ(Bandhavgarh Tiger Reserve) ಮತ್ತೆ ಮೂರು ಆನೆಗಳು ಮೃತಪಟ್ಟಿದ್ದು, ಸಾವಿನ ಸಂಖ್ಯೆ ಏಳಕ್ಕೇರಿದೆ. ಮಧ್ಯಪ್ರದೇಶದ ಅರಣ್ಯ ಸಚಿವ ರಾಮನಿವಾಸ್ ರಾವತ್ ಆನೆಗಳ ಸಾವಿನ ಬಗ್ಗೆ ವಿಶೇಷ ತನಿಖಾ ತಂಡ (SIT) ತನಿಖೆಗೆ ಆದೇಶಿಸಿದ್ದಾರೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬಿಟಿಆರ್‌ನ ಉಪನಿರ್ದೇಶಕ ಪ್ರಕಾಶ್‌ಕುಮಾರ್‌ ವರ್ಮಾ ಮಾತನಾಡಿ, ಆನೆಗಳು ಮೇವು ರೂಪದಲ್ಲಿ ನೀಡಿದ ರಾಗಿ ತಿಂದು ಸತ್ತಿವೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಆದರೆ ಶವಪರೀಕ್ಷೆಯ ನಂತರ ನಿಖರ ಕಾರಣ ತಿಳಿಯಲಿದೆ ಎಂದು ಹೇಳಿದ್ದಾರೆ. ಎಂಟು ವೈದ್ಯರ ತಂಡ ಆನೆಗಳ ಮರಣೋತ್ತರ ಪರೀಕ್ಷೆ ನಡೆಸುತ್ತಿದೆ. ಇದರ ನಂತರ, ಆನೆಗಳನ್ನು ಹೂಳಲಾಗುತ್ತದೆ. ಇದಕ್ಕಾಗಿ 300 ಚೀಲ ಉಪ್ಪನ್ನು ಆರ್ಡರ್ ಮಾಡಲಾಗಿದೆ. ಎರಡು ಜೆಸಿಬಿಗಳ ಸಹಾಯದಿಂದ ಹೊಂಡ ತೋಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಮಂಗಳವಾರ ಕೋರ್ ಜಂಗಲ್ ಪ್ರದೇಶದಲ್ಲಿ ನಾಲ್ಕು ಕಾಡಾನೆಗಳು (ಮೂರು ಹೆಣ್ಣು ಮತ್ತು ಒಂದು ಗಂಡು) ಶವವಾಗಿ ಪತ್ತೆಯಾಗಿದ್ದವು. ಈಗ ಮತ್ತೆ ಮೂರು ಆನೆಗಳು ಮೃತಪಟ್ಟಿವೆ. ಈ ಆನೆಗಳ ಹಿಂಡಿನಲ್ಲಿ ಒಟ್ಟು 13 ಆನೆಗಳಿದ್ದು, ಉಳಿದ ಆನೆಗಳ ಸ್ಥಿತಿ ಕೂಡ ಅಷ್ಟು ಸರಿ ಇಲ್ಲ ಎಂದು ತಿಳಿದು ಬಂದಿದೆ.

ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಘಟನೆ ಬೆಳಕಿಗೆ ಬಂದಿದ್ದು, ಬಾಂಧವ್‌ಗಢ ಹುಲಿ ಸಂರಕ್ಷಿತ ಪ್ರದೇಶ ಗಸ್ತು ತಿರುಗುವ ತಂಡಗಳು ಖಿತೌಲಿ ಶ್ರೇಣಿಯ ಕೋರ್ ಏರಿಯಾದ ಸಲ್ಖಾನಿಯಾ-ಚರಕ್ವಾರ್ ಕಾಡಿನಲ್ಲಿ ಮೃತಪಟ್ಟಿರುವ ಆನೆಗಳನ್ನು ನೋಡಿದ್ದರು. ಗಸ್ತು ಮತ್ತಷ್ಟು ತೀವ್ರಗೊಳಿಸಿದ ತಂಡವು ಸ್ವಲ್ಪ ದೂರದಲ್ಲಿ ಇದೇ ಸ್ಥಿತಿಯಲ್ಲಿ ಮತ್ತೊಂದು ಆನೆಯನ್ನು ಮತ್ತು ಅಸ್ವಸ್ಥಗೊಂಡಿದ್ದ ಐದು ಆನೆಗಳನ್ನು ನೋಡಿತ್ತು. ಪಶುವೈದ್ಯರನ್ನು ತಕ್ಷಣವೇ ಕರೆತಂದು ಚಿಕಿತ್ಸೆ ಕೊಡಿಸಲಾಯಿತಾದರೂ ನಾಲ್ಕು ಆನೆಗಳು ಸ್ಥಳದಲ್ಲಿಯೇ ಮೃತ ಪಟ್ಟಿದ್ದವು . ಈಗ ಮತ್ತೆ ಮೂರು ಆನೆಗಳು ಮೃತ ಪಟ್ಟಿವೆ. ಆನೆಗಳಿಗೆ ವಿಷ ಪ್ರಾಶನ ಮಾಡಲಾಗಿದೆ ಎಂದು ಊಹಿಸಲಾಗಿದೆ.

ಇದನ್ನೂ ಓದಿ: Viral News: ಮೃತ ಆನೆಯ ಅಂತಿಮ ದರ್ಶನ ಪಡೆಯಲು 80 ಕಿ.ಮೀ. ಕ್ರಮಿಸಿದ ಗಜಪಡೆ

ಮಂಗಳವಾರ ತಡರಾತ್ರಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅರಣ್ಯ ಸಚಿವ ರಾವತ್, ಬಾಂಧವ್‌ಗಢ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ಆನೆಗಳ ಅಕಾಲಿಕ ಮರಣವು ದುಃಖಕರ ಮತ್ತು ಹೃದಯ ವಿದ್ರಾವಕವಾಗಿದೆ ಎಂದು ಹೇಳಿದರು.

ಸಮಸ್ಯೆಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಕೂಡಲೇ ಎಸ್‌ಐಟಿ ರಚಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ರಾವತ್ ಹೇಳಿದರು.