ಮುಂಬೈ: ಮಹಾರಾಷ್ಟ್ರದ ಭಿವಾಂಡಿಯಲ್ಲಿ ಸಂಭವಿಸಿದ ಮೂರು ಮಹಡಿಗಳ ಕಟ್ಟಡ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 17ಕ್ಕೆ ಏರಿದ್ದು, ಅವಶೇಷಗಳಡಿಯಿಂದ ಇನ್ನೂ ಮೂರು ಮೃತ ದೇಹಗಳನ್ನು ಹೊರತೆಗೆಯಲಾಗಿದೆ ಎಂದು ವರದಿ ತಿಳಿಸಿವೆ.
ಸತತ 24 ಗಂಟೆಗಳ ನಂತರವೂ ರಕ್ಷಣಾ ಕಾರ್ಯ ಮುಂದುವರಿದಿದೆ. ಮೃತಪಟ್ಟಿರುವವರಲ್ಲಿ ಎಂಟು ಮಕ್ಕಳು ಸೇರಿದ್ದಾರೆ. ಸೋಮವಾರ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಕಲ್ಲು ಮಣ್ಣುಗಳ ಅಡಿ ಸಿಲುಕಿದ್ದ ಅಫ್ಸಾನಾ ಅನ್ಸಾರಿ ಎಂಬ 15 ವರ್ಷದ ಬಾಲಕಿಯ ದೇಹವನ್ನು ರಕ್ಷಣಾ ಸಿಬ್ಬಂದಿ ಹೊರತೆಗೆದಿದ್ದಾರೆ. ಸುಮಾರು 23 ಮಂದಿಯನ್ನು ಅವಶೇಷಗಳಡಿಯಿಂದ ರಕ್ಷಿಸಲಾಗಿದೆ.
ಕಳೆದ ಸೋಮವಾರ ಬೆಳಿಗ್ಗೆ 43 ವರ್ಷಗಳಷ್ಟು ಹಳೆಯದಾದ ಜಿಲಾನಿ ಕಟ್ಟಡ ಕುಸಿದಿದ್ದು, ಘಟನೆಯ ವೇಳೆಯಲ್ಲಿ 10 ಮಂದಿ ಮೃತಪಟ್ಟಿದ್ದರು. ಕಟ್ಟಡದ ಅವಶೇಗಳಡಿ 25ಕ್ಕೂ ಹೆಚ್ಚು ಮಂದಿ ಸಿಲುಕಿದ್ದಾರೆ ಎಂದು ಶಂಕಿಸಲಾಗಿತ್ತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ರಕ್ಷಣಾ ಕಾರ್ಯ ಮುಂದುವರಿಸಿದ್ದಾರೆ.