ನವದೆಹಲಿ: ದೇಶದಲ್ಲಿ ರಾಜ್ಯ ಸರ್ಕಾರಗಳ ಬುಲ್ಡೋಜರ್ ನೀತಿ(Bulldozer Justice) ಬಗ್ಗೆ ಮಾರ್ಗಸೂಚಿಗಳನ್ನು ರೂಪಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್(Supreme Court) ಇಂದು ತನ್ನ ತೀರ್ಪು ಪ್ರಕಟಿಸಿದೆ. ಆರೋಪಿಯ ಅಪರಾಧದ ಆಧಾರ ಮೇಲೆ ಆತನ ಆಸ್ತಿ-ಪಾಸ್ತಿ ನಾಶಕ್ಕೆ ಆದೇಶ ನೀಡುವುದು ಸರಿಯಾದ ಕ್ರಮವಲ್ಲ ಎಂದು ಖಡಕ್ ಆಗಿ ಹೇಳಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆವಿ ವಿಶ್ವನಾಥನ್ ನೇತೃತ್ವದ ದ್ವಿಸದಸ್ಯ ಪೀಠ ಇಂದು ಕೆಲವು ರಾಜ್ಯ ಸರ್ಕಾರಗಳ ಬುಲ್ಢೋಜರ್ ನೀತಿಯ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದೆ. ಶಿಕ್ಷಾರ್ಹ ಕ್ರಮವಾಗಿ ಆರೋಪಿಗಳ ವಿರುದ್ಧ ಅಧಿಕಾರಿಗಳ ಬುಲ್ಡೋಜರ್ ಕ್ರಮ” ನಿಲ್ಲಿಸಲು ಕೋರಿ ಸಲ್ಲಿಸಲಾದ ಮನವಿಗಳ ಬ್ಯಾಚ್‌ನ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್, ಕಾರ್ಯಾಂಗವು ನ್ಯಾಯಾಂಗವಾಗಲು ಸಾಧ್ಯವಿಲ್ಲ. ಅಲ್ಲದೇ ಯಾರು ತಪ್ಪಿತಸ್ಥರು? ಅವರಿಗೆ ಏನು ಶಿಕ್ಷೆ ನೀಡಬೇಕೆಂಬುದನ್ನೂ ನಿರ್ಧರಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಕಾನೂನಿನ ನಿಯಮವು ಪ್ರಜಾಪ್ರಭುತ್ವದ ಆಡಳಿತದ ಅಡಿಪಾಯವಾಗಿದೆ. ಆರೋಪಿಯ ತಪ್ಪನ್ನು ಪೂರ್ವಾಗ್ರಹ ಪಡಿಸಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯ ಮೇಲೆ ಆರೋಪವಿದೆ ಎಂಬ ಕಾರಣಕ್ಕಾಗಿ ಕಾರ್ಯಾಂಗವು ನಿರಂಕುಶವಾಗಿ ಅವರ ಮನೆಯನ್ನು ಕೆಡವಿದರೆ, ಅದು ಅಧಿಕಾರ ವಿಭಜನೆಯ ತತ್ವವನ್ನು ಉಲ್ಲಂಘಿಸುತ್ತದೆ ಎಂದು ನಾವು ತೀರ್ಮಾನಿಸಿದ್ದೇವೆ ಎಂದು ನ್ಯಾಯಮೂರ್ತಿ ಗವಾಯಿ ಹೇಳಿದರು.
ಕಾನೂನಿನ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸದೆ ಅಧಿಕಾರಿಗಳ ಯಾವುದೇ ಕ್ರಮವು ಸಂಪೂರ್ಣವಾಗಿ ಕಾನೂನು ಉಲ್ಲಂಘನೆಯಾಗುತ್ತದೆ. ಮನೆ ಕೇವಲ ಆಸ್ತಿಯಲ್ಲ ಅದು ಪ್ರತಿಯೊಬ್ಬ ನಾಗರಿಕನ ಘನತೆ, ಭಾವನಾತ್ಮಕ ವಿಚಾರ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಪ್ಯಾನ್ ಇಂಡಿಯಾ ನೀತಿ ಜಾರಿ
ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಕೆವಿ ವಿಶ್ವನಾಥನ್ ಅವರ ದ್ವಿಸದಸ್ಯ ಪೀಠವು ಮನೆಗಳು ಮತ್ತು ಇತರ ಆಸ್ತಿಗಳ “ಅಕ್ರಮ” ಧ್ವಂಸವನ್ನು ತಡೆಯಲು ದೇಶಾದ್ಯಂತ ಒಂದೇ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಸರ್ವೋಚ್ಚ ನ್ಯಾಯಾಲಯವು, ಕೆಡವುವಿಕೆಯ ಪ್ರಕ್ರಿಯೆಗಳನ್ನು ವೀಡಿಯೊ ಮಾಡಬೇಕು ಮತ್ತು ಸರಿಯಾಗಿ ಸಂರಕ್ಷಿಸಬೇಕು. ಅಲ್ಲದೆ, ಧ್ವಂಸ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗುವುದು ಮತ್ತು ಡಿಜಿಟಲ್ ಪೋರ್ಟಲ್‌ನಲ್ಲಿ ಪ್ರದರ್ಶಿಸಬೇಕು ಎಂದು ಕೋರ್ಟ್ ಹೇಳಿದೆ.
ಈ ಸುದ್ದಿಯನ್ನೂ ಓದಿ: Tirupati temple: ತಿರುಪತಿ ಪ್ರತ್ಯೇಕ ರಾಜ್ಯ ಆಗಬೇಕಾ? ಸುಪ್ರೀಂ ಕೋರ್ಟ್ ಹೇಳಿದ್ದೇನು?