Tuesday, 5th November 2024

Bullets Fired: ಚಲಿಸುತ್ತಿದ್ದ ರೈಲಿನ ಮೇಲೆ ಗುಂಡಿನ ದಾಳಿ; ತಪ್ಪಿದ ಭಾರಿ ಅನಾಹುತ

Bullets Fired

ಭುವನೇಶ್ವರ: ರೈಲು ಹಳಿಯಲ್ಲಿ ಕಲ್ಲು, ಸಿಲಿಂಡರ್‌ ಇಟ್ಟಿರುವ ಘಟನೆ ಇತ್ತೀಚೆಗೆ ಬೆಳಕಿಗೆ ಬಂದು ಆತಂಕ ಸೃಷ್ಟಿಯಾಗಿತ್ತು. ಈ ಘಟನೆ ಮರೆಯಾಗುವ ಮುನ್ನ ಚಲಿಸುವ ರೈಲಿನ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಒಡಿಶಾದಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್‌ ಯಾರಿಗೂ ಗಾಯಗಳಾಗಿಲ್ಲ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಸದ್ಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ (Bullets Fired).

ಒಡಿಶಾದ ಭದ್ರಕ್‌ ಜಿಲ್ಲೆಯಲ್ಲಿ ಈ ಗುಂಡಿನ ದಾಳಿ ನಡೆದಿದೆ. ಒಡಿಶಾದ ಪುರಿ-ಹೊಸದಿಲ್ಲಿ ನಡುವೆ ಸಂಚರಿಸುವ ನಂದನ್ ಕಾನನ್ ಎಕ್ಸ್‌ಪ್ರೆಸ್‌ ಮೇಲೆ ಅಪರಿಚಿತ ವ್ಯಕ್ತಿ ಗುಂಡಿನ ದಾಳಿ ನಡೆಸಿದ್ದಾನೆ. ಒಡಿಶಾದ ಭದ್ರಕ್ ನಿಲ್ದಾಣದ ಮೂಲಕ ರೈಲು ಹಾದು ಹೋಗುತ್ತಿದ್ದಾಗ ಮಂಗಳವಾರ (ನ. 5) ಬೆಳಗ್ಗೆ 9ರಿಂದ 9.30ರ ನಡುವೆ ಈ ಘಟನೆ ನಡೆದಿದೆ. ಘಟನೆಯ ತನಿಖೆಯನ್ನು ಸರ್ಕಾರಿ ರೈಲ್ವೆ ಪೊಲೀಸರು (Government Railway Police) ಕೈಗೆತ್ತಿಕೊಂಡಿದ್ದಾರೆ.

ʼʼ12816 ಆನಂದ್‌ ವಿಹಾರ್‌-ಪುರಿ ನಂದನ್‌ ಕಾನನ್ ಎಕ್ಸ್‌ಪ್ರೆಸ್‌ ಭದ್ರಕ್ ಮತ್ತು ಬೌದ್‌ಪುರ್ ವಿಭಾಗಗಳ ನಡುವೆ ಸಂಚರಿಸುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿ ದಾಳಿ ನಡೆಸಿದ್ದಾನೆ. 2 ಬುಲೆಟ್‌ಗಳು ಕೋಚ್‌ನ ಶೌಚಾಲಯದ ಕಿಟಕಿಯ ಹಲಗೆಗೆ ಬಡಿದಿವೆ. ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪುರಿ ತನಕ ಜಿಆರ್‌ಪಿ ಮತ್ತು ಆರ್‌ಪಿಎಫ್‌ ಬೆಂಗಾವಲು ಪಡೆ ತೆರಳಿದೆʼʼ ಎಂದು ಮೂಲಗಳು ತಿಳಿಸಿವೆ. ʼʼದಾಳಿಯ ಹಿಂದಿನ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಛಾರಂಪ ನಿಲ್ದಾಣದ ಗೇಟ್‌ ನಂ. 119 ಬಳಿ ಫೈರಿಂಗ್‌ ಮಾಡಲಾಗಿದೆʼʼ ಎಂದು ಪೊಲೀಸ್‌ ಅಧಿಕಾರಿಗಳು ವಿವರಿಸಿದ್ದಾರೆ.

ಮಂಗಳೂರಿನಲ್ಲಿ ರೈಲು ಹಳಿ ಮೇಲೆ ಕಲ್ಲಿಟ್ಟು ದುಷ್ಕೃತ್ಯಕ್ಕೆ ಯತ್ನ

ಮಂಗಳೂರು ಸಮೀಪದ ರೈಲು ಹಳಿಯ ಮೇಲೆ ಕಲ್ಲಿಟ್ಟು ಹಳಿ ತಪ್ಪಿಸಲು ಯತ್ನಿಸಿದ ಘಟನೆಯೊಂದು ಇತ್ತೀಚೆಗೆ ವರದಿಯಾಗಿತ್ತು. ಮಂಗಳೂರಿನ ಉಳ್ಳಾಲದ ತೊಕ್ಕೊಟ್ಟಿನಲ್ಲಿ ಮಂಗಳೂರು-ಕೇರಳ ರೈಲು ಮಾರ್ಗದ ಹಳಿಗಳ ಮೇಲೆ ದುಷ್ಕರ್ಮಿಗಳು ಕಲ್ಲು ಇಟ್ಟು ಪರಾರಿಯಾಗಿದ್ದರು. ರೈಲುಗಳ ಸಂಚರಿಸಿದ ವೇಳೆ ದೊಡ್ಡ ಸದ್ದು ಕೇಳಿ ಸ್ಥಳಿಯರು ಆತಂಕಗೊಂಡಿದ್ದು, ಸ್ಥಳಕ್ಕೆ ಹೋಗಿ ನೋಡಿದಾಗ ರೈಲ್ವೆ ಹಳಿಗಳ ಮೇಲೆ ಕಲ್ಲು ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಅ. 19ರ ತಡರಾತ್ರಿ ರೈಲ್ವೆ ಹಳಿಗಳ ಮೇಲೆ ಕಲ್ಲು ದುಷ್ಕರ್ಮಿಗಳು ಕಲ್ಲು ಇಟ್ಟಿದ್ದರು ಎನ್ನಲಾಗಿದೆ. ಸ್ಥಳೀಯರು ಇಬ್ಬರು ದುಷ್ಕರ್ಮಿಗಳು ಕಲ್ಲು ಇಟ್ಟಿರುವುದನ್ನು ನೋಡಿರುವುದಾಗಿ ಹೇಳಿಕೆ ನೀಡಿದ್ದರು.

ರೈಲು ಹಳಿಯಲ್ಲಿ ಗ್ಯಾಸ್ ಸಿಲಿಂಡರ್ ಪತ್ತೆ

ಅದಕ್ಕೂ ಮುನ್ನ ಉತ್ತರಾಖಂಡದ ರೂರ್ಕಿ ಬಳಿಯ ರೈಲ್ವೆ ಹಳಿಗಳಲ್ಲಿ ಖಾಲಿ ಎಲ್‌ಪಿಜಿ ಸಿಲಿಂಡರ್ ಪತ್ತೆಯಾಗಿತ್ತು. ಅ. 13ರಂದು ಈ ಘಟನೆ ನಡೆದಿದ್ದು, ಗೂಡ್ಸ್ ರೈಲಿನ ಲೋಕೋ ಪೈಲಟ್ ಸಿಲಿಂಡರ್ ಅನ್ನು ಕಂಡು ರೈಲು ನಿಲ್ಲಿಸಿ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿತ್ತು. ಧಂಧೇರಾದಿಂದ ಸುಮಾರು 1 ಕಿಲೋಮೀಟರ್ ದೂರದಲ್ಲಿರುವ ಲಂಡೌರಾ ಮತ್ತು ಧಂಧೇರಾ ನಿಲ್ದಾಣಗಳ ನಡುವೆ ಬೆಳಗ್ಗೆ 6: 35ಕ್ಕೆ ಈ ಘಟನೆ ಸಂಭವಿಸಿದೆ ಎಂದು ಉತ್ತರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಸಿಪಿಆರ್‌ ) ಹಿಮಾಂಶು ಉಪಾಧ್ಯಾಯ ನೀಡಿದ್ದರು.

ಈ ಸುದ್ದಿಯನ್ನೂ ಓದಿ: Train Accident : ಇತ್ತೀಚಿನ ದಿನಗಳಲ್ಲಿ ರೈಲು ಅಪಘಡ ಹೆಚ್ಚಳವಾಗಲು ಕಾರಣಗಳೇನು? ಇಲ್ಲಿದೆ ಸತ್ಯ ಸಂಗತಿ