Sunday, 15th December 2024

ಮೃತ ಉಗ್ರನ ತಂದೆಯಿಂದ ಪುಲ್ವಾಮಾದಲ್ಲಿ ಧ್ವಜಾರೋಹಣ

ಪುಲ್ವಾಮ: ಸೇನಾಪಡೆಗಳ ಕಾರ್ಯಾಚರಣೆ ವೇಳೆ ಹತ್ಯೆಯಾಗಿದ್ದ ಹಿಜ್ಬುಲ್​ ಮುಜಾಹಿದ್ದೀನ್ ಉಗ್ರ ಸಂಘ ಟನೆಯ ಕಮಾಂಡರ್​ ಬುರ್ಹಾನ್​​ ವಾನಿಯ ತಂದೆ ಮುಜಾಫರ್​ ವಾನಿ 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಪುಲ್ವಾಮಾದ ಟ್ರಾಲ್​ನಲ್ಲಿ ಧ್ವಜಾರೋಹಣ ಮಾಡಿದ್ದಾರೆ.

75ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಪುಲ್ವಾಮಾದ ಸರ್ಕಾರಿ ಶಾಲೆಯೊಂದರಲ್ಲಿ ಧ್ವಜಾರೋಹಣ ನೆರವೇರಿದ್ದು, ವೃತ್ತಿಯಲ್ಲಿ ಶಿಕ್ಷಕರಾಗಿರುವ ಮುಜಾಫರ್ ವಾನಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ. ಧ್ವಜಾರೋಹಣ ಮಾಡಿರುವ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ. ಬುರ್ಹಾನ್​ ವಾನಿ ಹಿಜ್ಬುಲ್​ ಮುಜಾಹಿದ್ದೀನ್​ ಉಗ್ರ ಸಂಘಟನೆಯ ಕಮಾಂಡರ್ ಆಗಿದ್ದ. ತನ್ನ ಸೋಷಿಯಲ್ ಮೀಡಿಯಾ ಅಕೌಂಟ್​ಗಳ ಮೂಲಕ ಕಾಶ್ಮೀರಿ ಯುವಕರನ್ನು ಉಗ್ರಸಂಘಟನೆಗೆ ಸೆಳೆಯುವ ಪ್ರಯತ್ನವನ್ನು ಸದಾ ಮಾಡುತ್ತಿದ್ದ.

2016ರಲ್ಲಿ ಈತನ ವಿರುದ್ಧ ಕಾರ್ಯಾಚರಣೆ ಮಾಡಿ ಹತ್ಯೆ ಮಾಡಲಾಗಿತ್ತು. ಬುರ್ಹಾನ್​ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಪೊಲೀಸ್​ ಐಪಿಎಸ್​ ಅಧಿಕಾರಿ ಅಬ್ದುಲ್​ ಜಬ್ಬರ್​​ಗೆ, ಕಳೆದ ವರ್ಷ ಗಣರಾಜ್ಯೋತ್ಸವದಂದು ಪೊಲೀಸ್​ ಮೆಡಲ್​ ಕೊಟ್ಟು ಪುರಸ್ಕರಿಸಲಾಗಿತ್ತು.

ಬುರ್ಹಾನ್​ 2010ರಲ್ಲಿ ಮನೆಯನ್ನು ತೊರೆದು ಹೋಗಿ ಹಿಜ್ಬುಲ್ ಮುಜಾಹಿದ್ದೀನ್​ ಸಂಘಟನೆ ಸೇರಿಕೊಂಡಿದ್ದ. ಬುರ್ಹಾನ್ ವಾನಿ ಹತ್ಯೆಯನ್ನು ಖಂಡಿಸಿ ಕಾಶ್ಮೀರದಲ್ಲಿ ಸುಮಾರು 5 ತಿಂಗಳ ಕಾಲ ಅವನ ಅನುಯಾಯಿಗಳು ಮುಷ್ಕರ ನಡೆಸಿದ್ದವು. ಅಂತಹ ದೊಡ್ಡ ಉಗ್ರನ ತಂದೆ ಇಂದು ರಾಷ್ಟ್ರಧ್ವಜ ಹಾರಿಸಿದ್ದು ಪ್ರಶಂಸೆಗೆ ಕಾರಣವಾಗಿದೆ.