Thursday, 21st November 2024

ಉಪಚುನಾವಣೆಗೆ ಹುತಾತ್ಮ​ ಯೋಧನ ಪತ್ನಿಗೆ ಬಿಜೆಪಿ ಟಿಕೆಟ್

ಜಲ್ಪೈಗುರಿ: ಪಶ್ಚಿಮ ಬಂಗಾಳದ ಧುಪ್​ಗುರಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.

ಹುತಾತ್ಮ ಸಿಆರ್​ಪಿ​ಎಫ್​ ಯೋಧ ಜಗನ್ನಾಥ್ ರಾಯ್ ಅವರ ಪತ್ನಿ ತಾಪಸಿ ರಾಯ್ ಅವರಿಗೆ ಕೇಸರಿ ಪಕ್ಷ ಟಿಕೆಟ್ ಘೋಷಣೆ ಮಾಡಿದೆ.

ಜಲ್ಪೈಗುರಿ ಜಿಲ್ಲೆಯ ಧುಪ್​ಗುರಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ಸೆಪ್ಟೆಂಬರ್ 5ರಂದು ನಿಗದಿಯಾಗಿದೆ. ಈ ಕ್ಷೇತ್ರ ದಿಂದ ಆಯ್ಕೆಯಾಗಿದ್ದ ಬಿಜೆಪಿಯ ಬಿಷ್ಣುಪದ ರಾಯ್ ಉಸಿರಾಟದ ಸಮಸ್ಯೆಯಿಂದ ಜುಲೈ 25ರಂದು ನಿಧನರಾಗಿದ್ದರು.

2021ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬಿಷ್ಣುಪದ ರಾಯ್ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಮಿತಾಲಿ ರಾಯ್ ವಿರುದ್ಧ ಗೆಲುವು ಸಾಧಿಸಿದ್ದರು. ರಾಯ್ 1,04,688 ಮತ ಗಳನ್ನು ಪಡೆದರೆ, ಮಿತಾಲಿ ರಾಯ್ 1,00,333 ಮತಗಳನ್ನು ಪಡೆದಿದ್ದರು. ಈ ಮೂಲಕ ಬಿಷ್ಣುಪದ ರಾಯ್ 4,355 ಮತಗಳಿಂದ ಜಯ ದಾಖಲಿಸಿದ್ದರು. ಮಂಗಳವಾರ ರಾತ್ರಿ ಬಿಜೆಪಿ ಪ್ರಧಾನ ಕಚೇರಿಯಿಂದ ಉಪಚುನಾವಣೆಗೆ ಅಭ್ಯರ್ಥಿ ಘೋಷಿಸಲಾಗಿದೆ.

ತಾಪಸಿ ರಾಯ್ ಯಾರು?: ಧುಪ್​ಗುರಿ ಉಪಚುನಾವಣೆಗೆಬಿಜೆಪಿ ಅಭ್ಯರ್ಥಿಯಾಗಿರುವ ತಾಪಸಿ ರಾಯ್ ಹುತಾತ್ಮ ಯೋಧ ಜಗನ್ನಾಥ್ ರಾಯ್ ಅವರ ಪತ್ನಿ. ಸಿಆರ್‌ಪಿಎಫ್‌ನ 73ನೇ ಬೆಟಾಲಿಯನ್‌ನ ಯೋಧರಾಗಿದ್ದ ಜಗನ್ನಾಥ್​ ರಾಯ್​, 2021ರ ಮಾರ್ಚ್ 25ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾಗಿದ್ದರು.