ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ತಂದ ಮೂರು ಕ್ರಿಮಿನಲ್ ಕಾನೂನುಗಳನ್ನು ರದ್ದು ಗೊಳಿಸುವುದಾಗಿ ಪಿ.ಚಿದಂಬರಂ ನೀಡಿದ ಹೇಳಿಕೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
1960ರ ದಶಕದಿಂದಲೂ ಕಾಂಗ್ರೆಸ್ ತುಷ್ಟೀಕರಣ ರಾಜಕಾರಣದಲ್ಲಿ ತೊಡಗಿದೆ ಮತ್ತು ಗೋಡೆಗಳ ಮೇಲೆ ಬರೆದಿರುವ ಹೀನಾಯ ಸೋಲನ್ನು ಓದಿದ ನಂತರ ಕಾಂಗ್ರೆಸ್ ನಾಯಕರು ತಮ್ಮ ಧೈರ್ಯವನ್ನು ಕಳೆದುಕೊಂಡಿದ್ದಾರೆ ಎಂದು ಶಾ ಆರೋಪಿಸಿದರು.
ಸಿಎಎ ಮತ್ತು ಮೂರು ಕ್ರಿಮಿನಲ್ ಕಾನೂನುಗಳ ಬಗ್ಗೆ ಚಿದಂಬರಂ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾ, “ಸಿಎಎ ಉಳಿಯುತ್ತದೆ ಮತ್ತು ಮೂರು (ಕ್ರಿಮಿನಲ್) ಕಾನೂನುಗಳನ್ನು ಜಾರಿಗೆ ತರಲಾಗುವುದು” ಎಂದು ಹೇಳಿದರು.
ಸಿಎಎಯ ನ್ಯೂನತೆಗಳು ಯಾವುವು ಎಂದು ಚಿದಂಬರಂ ಹೇಳುವುದಿಲ್ಲ, ಅವರು ಅದನ್ನು ರದ್ದುಗೊಳಿಸುವುದಾಗಿ ಹೇಳುತ್ತಾರೆ. ಏಕೆ? ಏಕೆಂದರೆ ಅವರು ತಮ್ಮ ಅಲ್ಪಸಂಖ್ಯಾತ ಮತ ಬ್ಯಾಂಕ್ ಅನ್ನು ಬಲಪಡಿಸಬೇಕಾಗಿದೆ. ಬಿಜೆಪಿ ತನ್ನ ತತ್ವಗಳಿಗೆ ಬದ್ಧವಾಗಿದೆ. ನಾವು ಯಾರಿಗೂ ಅನ್ಯಾಯ ಮಾಡುವು ದಿಲ್ಲ. ನಾವು ನ್ಯಾಯ ಒದಗಿಸುತ್ತೇವೆ… ಆದರೆ ನಾವು ತುಷ್ಟೀಕರಣವನ್ನೂ ಮಾಡುವುದಿಲ್ಲ… ಸಿಎಎಗೆ ಕಾಂಗ್ರೆಸ್ಸಿಗೆ ಏನು ಆಕ್ಷೇಪಣೆ ಇದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಸಿಎಎ ಯಾರ ಪೌರತ್ವವನ್ನೂ ಕಸಿದುಕೊಳ್ಳುವುದಿಲ್ಲ, ಅವರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ” ಎಂದು ಅಮಿತ್ ಶಾ ತಿಳಿಸಿದರು.