Friday, 22nd November 2024

ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಯಾರೂ ಪೌರತ್ವ ಕಳೆದುಕೊಳ್ಳುವುದಿಲ್ಲ: ಶಾ ಸ್ಪಷ್ಟನೆ

ವದೆಹಲಿ: ಸಿಎಎ ಅಂದರೆ ಪೌರತ್ವ ತಿದ್ದುಪಡಿ ಕಾಯ್ದೆಯಿಂದಾಗಿ ಯಾರೂ ತಮ್ಮ ಪೌರತ್ವವನ್ನು ಕಳೆದುಕೊಳ್ಳುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಸ್ಪಷ್ಟಪಡಿಸಿದ್ದಾರೆ.

ಮತಬ್ಯಾಂಕ್ ಸೃಷ್ಟಿಸಲು, ವಿರೋಧ ಪಕ್ಷಗಳು ಸಿಎಎಯಿಂದ ಮುಸ್ಲಿಮರು ತಮ್ಮ ಪೌರತ್ವ ಕಳೆದುಕೊಳ್ಳುತ್ತಾರೆ ಮತ್ತು ಅವರ ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತಾರೆ ಎಂಬ ಭ್ರಮೆಯನ್ನು ಹಬ್ಬಿಸಿದ್ದಾರೆ. ಆದರೆ ಸಿಎಎ ಪೌರತ್ವ ಹಿಂಪಡೆಯಲು ಕಾನೂನಲ್ಲ ಆದರೆ ಅದನ್ನು ನೀಡಲು ಇರುವ ಕಾನೂನು ಎಂದಿದ್ದಾರೆ.

‘ಸಿಎಎ ಜಾರಿಯಾದ ನಂತರ, ದೇಶದಲ್ಲಿ ದೊಡ್ಡ ತಪ್ಪು ತಿಳುವಳಿಕೆ ಹರಡಿತು ಮತ್ತು ಈ ಮಧ್ಯೆ ಕೋವಿಡ್ ಬಂತು. ನಾವು ಪ್ರಜಾಪ್ರಭುತ್ವ ರಾಷ್ಟ್ರ ದಲ್ಲಿದ್ದೇವೆ. ಸತ್ಯದ ಬಗ್ಗೆ ತಪ್ಪು ತಿಳುವಳಿಕೆ ಹರಡಿದಾಗ, ಅಧಿಕಾರದಲ್ಲಿರುವ ಪಕ್ಷವು ಜನರಿಗೆ ಸತ್ಯ ತಲುಪಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ. ತಮ್ಮ ಮತಬ್ಯಾಂಕ್ ರಚಿಸಲು, ವಿರೋಧ ಪಕ್ಷಗಳು ಸಿಎಎ ಈ ದೇಶದ ಅಲ್ಪಸಂಖ್ಯಾತರ, ವಿಶೇಷವಾಗಿ ಮುಸ್ಲಿಂ ಸಹೋದರ ಸಹೋದರಿಯರ ಮತದಾ ನದ ಹಕ್ಕು ಮತ್ತು ನಾಗರಿಕ ಅಂಶವನ್ನು ಕಸಿದುಕೊಳ್ಳುತ್ತದೆ ಎಂಬ ತಪ್ಪು ಕಲ್ಪನೆ ಹರಡಿತು. ಆದರೆ ಇದು ವಿರುದ್ಧವಾಗಿದೆ ಎಂದಿದ್ದಾರೆ.

‘ಸಿಎಎ ಪೌರತ್ವ ನೀಡುವ ಕಾನೂನು. ಸಿಖ್, ಬೌದ್ಧ, ಜೈನ್, ಕ್ರಿಶ್ಚಿಯನ್, ಹಿಂದೂ ಸೇರಿ ಮೂರು ದೇಶಗಳಿಂದ ಚಿತ್ರಹಿಂಸೆಗೆ ಒಳಗಾದ ಎಲ್ಲಾ ಸಹೋ ದರರು ವರ್ಷಗಟ್ಟಲೆ ಇಲ್ಲಿ ಕುಳಿತಿದ್ದಾರೆ, ಅವರಿಗೆ ಪೌರತ್ವ ಇಲ್ಲ. ಅವರು ತಮ್ಮ ಹೆಸರಿನಲ್ಲಿ ಆಸ್ತಿ ಖರೀದಿಸಲು ಸಾಧ್ಯವಿಲ್ಲ, ಸರ್ಕಾರಿ ಕೆಲಸ ತೆಗೆದುಕೊಳ್ಳಲು ಸಾಧ್ಯವಿಲ್ಲ. ಕೋಟಿಗಟ್ಟಲೆ ಜನರ ಸಮಸ್ಯೆಗಳಿಗೆ ಕಾಂಗ್ರೆಸ್‌ ಬಳಿ ಉತ್ತರವಿಲ್ಲ. ಅದು ತನ್ನ ಮತಬ್ಯಾಂಕ್ ರಾಜಕಾರಣದಲ್ಲಿ ನಿರತ ವಾಗಿದೆ ಮತ್ತು CAA ಯಿಂದ ದೇಶದ ಮುಸ್ಲಿಮರು ತಮ್ಮ ಪೌರತ್ವ ಕಳೆದುಕೊಳ್ಳುತ್ತಾರೆ ಎಂಬ ಸಂಪೂರ್ಣ ತಪ್ಪು ಕಲ್ಪನೆಯನ್ನು ಹರಡಿದೆ ಎಂದಿದ್ದಾರೆ.

ದೇಶದ ಮುಸ್ಲಿಮರು ಭಯಪಡುವ ಅಗತ್ಯವಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಲು ಬಯಸುತ್ತೇನೆ. ಸಿಎಎ ಕೇವಲ ತೆಗೆದುಕೊಳ್ಳುವ ಕಾನೂನಲ್ಲ, ಪೌರತ್ವ ನೀಡುವ ಕಾನೂನು. ಮತ್ತು ಸಿಎಎಗೆ ಸಂಬಂಧಿಸಿದಂತೆ, ಸ್ವಾತಂತ್ರ್ಯದ ಸಮಯದಲ್ಲಿ, ಕಾಂಗ್ರೆಸ್, ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಮೌಲಾನಾ ಆಜಾದ್, ಸರ್ದಾರ್ ಪಟೇಲ್ ಮತ್ತು ರಾಜೇಂದ್ರ ಬಾಬು ಎಲ್ಲರೂ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದಿಂದ ಬರುವ ಎಲ್ಲಾ ನಿರಾಶ್ರಿತರಿಗೆ ನಾವು ಪೌರತ್ವವನ್ನು ನೀಡುತ್ತೇವೆ ಎಂದು ಭರವಸೆ ನೀಡಿದ್ದರು. ಆ ಭರವಸೆಯನ್ನು ಕಾಂಗ್ರೆಸ್ ಪಕ್ಷ ಈಡೇರಿಸಿಲ್ಲ. ಒಂದು ರೀತಿಯಲ್ಲಿ ಇದು ನೆಹರೂ-ಲಿಯಾಕತ್ ಒಪ್ಪಂದದ ಅನುಷ್ಠಾನ ಎಂದಿದ್ದಾರೆ.