ಅಹಮದಾಬಾದ್: ಬಲ್ಗೇರಿಯಾದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮತ್ತು ಹಲ್ಲೆ ನಡೆಸಿ, ಉದ್ದೇಶ ಪೂರ್ವಕ ಅವಮಾನ ಮಾಡಿರುವ ಆರೋಪ ಸಂಬಂಧ ಕ್ಯಾಡಿಲಾ ಫಾರ್ಮಾಸ್ಯುಟಿಕಲ್ಸ್ ಕಂಪನಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಗುಜರಾತ್ ಹೈಕೋರ್ಟ್ ನಿರ್ದೇಶನದ ಮೇರೆಗೆ ಎಫ್‌ಐಆರ್ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಗುಜರಾತ್ ಹೈಕೋರ್ಟ್ ಡಿ.22ರಂದು ನೀಡಿರುವ ನಿರ್ದೇಶನ ಅನುಸಾರ, ಸಂತ್ರಸ್ತೆಯ ದೂರು ಆಧರಿಸಿ ಕ್ಯಾಡಿಲಾ ಫಾರ್ಮಾ ಸಿಎಂಡಿ ರಾಜೀವ್ ಮೋದಿ ಮತ್ತು ಜಾನ್ಸನ್ ಮ್ಯಾಥ್ಯೂ ಎಂಬುವವರ ವಿರುದ್ಧ ಸೋಲಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ಎಸಿಪಿ ಎಚ್.ಎಂ. ಕನ್ಸಾಗ್ರ ತಿಳಿಸಿದ್ದಾರೆ.
ಮಹಿಳೆಯ ದೂರಿನ ಬಗ್ಗೆ ಸಮರ್ಥ ಪೊಲೀಸ್ ಅಧಿಕಾರಿಯಿಂದ ತನಿಖೆ ನಡೆಸುವಂತೆ ಆದೇಶಿಸಲು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ಗೆ ಹೈಕೋರ್ಟ್ ನಿರ್ದೇಶಿಸಿದೆ. ಡಿಐಜಿ ನೇಮಿಸುವ ಹಿರಿಯ ಐಪಿಎಸ್ ಅಧಿಕಾರಿ ಮೇಲ್ವಿಚಾರಣೆಯಲ್ಲಿ ಎರಡು ತಿಂಗಳೊಳಗೆ ತನಿಖೆ ಪೂರ್ಣಗೊಳಿಸುವಂತೆಯೂ ಆದೇಶ ದಲ್ಲಿ ಸೂಚಿಸಿದೆ.
2022ರ ನವೆಂಬರ್ 24ರಂದು ಭಾರತಕ್ಕೆ ಬಂದಿದ್ದ ಬಲ್ಗೇರಿಯಾದ ಮಹಿಳೆ ಅಹಮದಾಬಾದ್ ಮೂಲದ ಕ್ಯಾಡಿಲಾ ಫಾರ್ಮಾ ಕಂಪನಿಯಲ್ಲಿ ವಿಮಾನದ ಪರಿಚಾರಕಿಯಾಗಿ ಕೆಲಸಕ್ಕೆ ಸೇರಿದ್ದರು. ಕೆಲಸ ವೇಳೆ ಅತ್ಯಾಚಾರ, ಹಲ್ಲೆ ನಡೆದಿದೆ.