ನವದೆಹಲಿ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮುಖ್ಯ ಕಾರ್ಯದರ್ಶಿ ಕೇಶವ ಚಂದ್ರ ಅವರ ಅಮಾನತು ಮತ್ತು ಲೆಫ್ಟಿನೆಂಟ್ ಗವರ್ನರ್ ಅಡ್ಮಿರಲ್ ಡಿಕೆ ಜೋಶಿ ಅವರಿಗೆ ದಂಡ ವಿಧಿಸಿ ಕಲ್ಕತ್ತಾ ಹೈಕೋರ್ಟ್‌ನ ಪೋರ್ಟ್ ಬ್ಲೇರ್ ಸರ್ಕ್ಯೂಟ್ ಬೆಂಚ್ ನೀಡಿದ ಆದೇಶಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ.
ಭಾರತದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ಈ ವಿಷಯವನ್ನು ಭಾರತದ ಮುಖ್ಯ ನ್ಯಾಯ ಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ಅವರ ಮುಂದೆ ಪ್ರಸ್ತಾಪಿಸಿ, ತಕ್ಷಣವೇ ಆದೇಶ ನೀಡುವಂತೆ ಕೋರಿ ದರು. ಹೈಕೋರ್ಟ್ ನ್ಯಾಯಾಂಗ ನಿಂದನೆ ಅಧಿಕಾರವನ್ನು ಚಲಾಯಿಸಿದೆ ಮತ್ತು ಮುಖ್ಯ ಕಾರ್ಯದರ್ಶಿಯನ್ನು ಅಮಾನತುಗೊಳಿಸಿದೆ ಎಂದು ಎಜಿ ಸೂಚಿಸಿದರು. ಆಗ ಸಿಜೆಐ ಡಿವೈ ಚಂದ್ರಚೂಡ್ “ಆ ಆದೇಶವನ್ನು ಪಡೆಯಲು ನೀವು ಕೆಲವು ಕಠಿಣ ಕ್ರಮಗಳನ್ನು ತೆಗೆದು ಕೊಂಡಿರಬೇಕು” ಎಂದು ಕೇಳಿದರು.
ಈ ಆದೇಶವು ದಿನಗೂಲಿ ಕಾರ್ಮಿಕರನ್ನು ಕಾಯಂಗೊಳಿಸುವುದಕ್ಕೆ ಸಂಬಂಧಿಸಿದೆ ಎಂದು ಲೆಫ್ಟಿನೆಂಟ್ ಜನರಲ್ ಪೀಠಕ್ಕೆ ವಿವರಿಸಿದರು.
ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಅರ್ಜಿಯ ಕುರಿತು ನೋಟಿಸ್ ಜಾರಿಗೊಳಿಸಿ ಆಗಸ್ಟ್ 11ಕ್ಕೆ ಮುಂದೂಡಿತು.
ಮುಖ್ಯ ಕಾರ್ಯದರ್ಶಿಯನ್ನು ಅಮಾನತುಗೊಳಿಸಿದ ಆದೇಶ ಮತ್ತು ಎಲ್‌ಜಿಗೆ 5 ಲಕ್ಷ ರೂ. ದಂಡ ವಿಧಿಸಿರುವುದು ಸ್ವಲ್ಪ ಹೆಚ್ಚು ಎಂದು ಸಿಜೆಐ ಹೇಳಿದರು. ಬಳಿಕ ಹೈಕೋರ್ಟ್ ನೀಡಿದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತು.
ದಿನಗೂಲಿ ಕಾರ್ಮಿಕರಿಗೆ ಹೆಚ್ಚಿನ ವೇತನ ಹಾಗೂ ತುಟ್ಟಿ ಭತ್ಯೆ ಪಾವತಿ ಮಾಡಬೇಕು ಎನ್ನುವ ತನ್ನ ಆದೇಶ ಉಲ್ಲಂಘಿಸಿದ ಅಂಡಮಾನ್ ನಿಕೋಬಾರ್ ಕೇಂದ್ರಾ ಡಳಿತ ಪ್ರದೇಶದ ಮುಖ್ಯ ಕಾರ್ಯದರ್ಶಿ ಕೇಶವ್ ಚಂದ್ರ ಅವರನ್ನು ಕೋಲ್ಕತ್ತ ಹೈಕೋರ್ಟ್‌ನ ಪೋರ್ಟ್ ಬ್ಲೇಯರ್ ಪೀಠ ಅಮಾನತು ಮಾಡಿತ್ತು. ಅಷ್ಟೇ ಅಲ್ಲದೆ ಲೆಫ್ಟಿನೆಂಟ್ ಗವರ್ನರ್ ಡಿಕೆ ಜೋಶಿ ಅವರಿಗೆ 5 ಲಕ್ಷ ದಂಡ ವಿಧಿಸಿತ್ತು.