ಒಟ್ಟಾವ: ತನ್ನ ದೇಶದಿಂದ ಭಾರತಕ್ಕೆ ತೆರಳುವ ಪ್ರಯಾಣಿಕರಿಗೆ (Passengers) ವಿಧಿಸಿದ್ದ ಹೆಚ್ಚಿನ ಭದ್ರತಾ ಸ್ಕ್ರೀನಿಂಗ್ ಕ್ರಮವನ್ನು (Enhanced Security Screening) ಕೆನಡಾ ಸರ್ಕಾರ (Canada Government) ಹಿಂದಕ್ಕೆ ಪಡೆದಿದೆ. ಕೆಲ ದಿನಗಳ ಹಿಂದೆಯಷ್ಟೇ ಈ ಹೆಚ್ಚುವರಿ ಸ್ಕೀನಿಂಗ್ ಪರೀಕ್ಷೆಯನ್ನು ಜಾರಿಗೊಳಿಸಿತ್ತು. ಈ ಬಗ್ಗೆ ಫೆಡರಲ್ ಸಾರಿಗೆ ಸಚಿವೆ ಅನಿತಾ ಆನಂದ್ (Anita Anand) ಹೆಚ್ಚುವರಿ ಸ್ಕ್ರೀನಿಂಗ್ ಕ್ರಮಗಳನ್ನು ತೆಗೆದುಹಾಕಲಾಗಿದೆ ಎಂದು ಹೇಳಿದ್ದಾರೆ.
ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಗೆ ಸಂಬಂಧಿಸಿದಂತೆ ಕೆನಡಾ ಹಾಗೂ ಭಾರತದ ರಾಜತಾಂತ್ರಿಕತೆ ಉದ್ವಿಗ್ನಗೊಂಡಿರುವ ಸಮಯದಲ್ಲಿ ಕೆನಡಾ ಸರ್ಕಾರ ಈ ನಿರ್ಣಯವನ್ನು ತೆಗೆದುಕೊಂಡಿತ್ತು. ಈ ಹಿಂದೆ ಅನಿತಾ ಆನಂದ್ “ಹೆಚ್ಚಿನ ಎಚ್ಚರಿಕೆಯ ಕಾರಣದಿಂದ, ಭಾರತಕ್ಕೆ ಪ್ರಯಾಣಿಸುವವರಿಗೆ ಹೆಚ್ಚುವರಿ ಭದ್ರತಾ ಸ್ಕ್ರೀನಿಂಗ್ ಅನ್ನು ಸರ್ಕಾರವು ತಾತ್ಕಾಲಿಕವಾಗಿ ಜಾರಿಗೊಳಿಸುತ್ತದೆ” ಎಂದು ಹೇಳಿದ್ದರು. ಆದರೆ ನಿಯಮಗಳನ್ನು ಹಠಾತ್ ಬದಲಾವಣೆ ಮಾಡಿ ಹೆಚ್ಚುವರಿ ಸ್ಕ್ರೀನಿಂಗ್ ಪರೀಕ್ಷೆಯನ್ನು ತೆಗೆದು ಹಾಕಿದೆ. ಸರ್ಕಾರದ ಈ ಕ್ರಮಕ್ಕೆ ನಿರ್ದಿಷ್ಟ ಕಾರಣಗಳು ತಿಳಿದು ಬಂದಿಲ್ಲ.
ಬಾಂಬ್ ಬೆದರಿಕೆ ಹಿನ್ನೆಲೆ ಹೆಚ್ಚುವರಿ ಸ್ಕ್ರೀನಿಂಗ್
ಅಕ್ಟೋಬರ್ನಲ್ಲಿ ನವದೆಹಲಿಯಿಂದ ಚಿಕಾಗೋಗೆ ತೆರಳುವ ಏರ್ ಇಂಡಿಯಾ ವಿಮಾನದಲ್ಲಿ ಬಾಂಬ್ ಬೆದರಿಕೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ವಿಮಾನವನ್ನು ಕೆನಡಾದ ಇಕಾಲುಯಿಟ್ಗೆ ತಿರುಗಿಸಲಾಗಿತ್ತು ಹಾಗೂ ತಪಾಸಣೆಗೆ ಒಳಪಡಿಸಲಾಗಿತ್ತು. ತಪಾಸಣೆಯ ನಂತರ ಯಾವುದೇ ಸ್ಫೋಟಕ ಸಾಧನ ಪತ್ತೆಯಾಗಿರಲಿಲ್ಲ. ನಂತರ ಕೆನಡಾದ ವಿಮಾನ ನಿಲ್ದಾಣಗಳ ನಿರ್ಬಂಧಿತ ಪ್ರದೇಶಗಳಿಗೆ ಪ್ರವೇಶಿಸುವ ಮೊದಲು ಭಾರತಕ್ಕೆ ತೆರಳುವ ಪ್ರಯಾಣಿಕರು ಮತ್ತು ಅವರ ಲಗೇಜ್ಗಳನ್ನು ಪರೀಕ್ಷಿಸುವುದಾಗಿ ತಿಳಿಸಿತ್ತು. ಅದರ ಉಸ್ತುವಾರಿಯನ್ನು ಕೆನಡಾದ ಏರ್ ಟ್ರಾನ್ಸ್ಪೋರ್ಟ್ ಸೆಕ್ಯುರಿಟಿ ಅಥಾರಿಟಿ (ಸಿಎಟಿಎಸ್ಎ) ವಹಿಸಿಕೊಂಡಿತ್ತು.
ಕೆನಡಾ ಹಾಗೂ ಭಾರತದ ರಾಜತಾಂತ್ರಿಕ ಸಂಬಂಧ ಸಂಪೂರ್ಣವಾಗಿ ಹದಗೆಟ್ಟಿದೆ. 2023ರ ಜೂನ್ನಲ್ಲಿ ನಡೆದಿದ್ದ ಖಲಿಸ್ತಾನಿ ಉಗ್ರ ಹಾಗೂ ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜಾರ್ನ ಕೊಲೆ ಪ್ರಕರಣದ ಬಳಿಕ ಶುರುವಾದ ಬಿಕ್ಕಟ್ಟು, ಈಗ ರಾಯಭಾರ ಅಧಿಕಾರಿಗಳನ್ನು ವಜಾಗೊಳಿಸುವ ಪ್ರತೀಕಾರದ ಹಂತಕ್ಕೆ ತಲುಪಿದೆ. ನಿಜ್ಜಾರ್ ಹತ್ಯೆಯಲ್ಲಿ ಒಟ್ಟಾವದಲ್ಲಿನ ರಾಯಭಾರಿ ಸಂಜಯ್ ಕುಮಾರ್ ವರ್ಮಾ ಅವರ ಪಾತ್ರವಿದೆ. ಹೀಗಾಗಿ ಅವರನ್ನು ತನಿಖೆಗೆ ಒಳಪಡಿಸಬೇಕು ಎಂಬ ಕೆನಡಾ ಆರೋಪ ಹೊಸ ಸಂಘರ್ಷಕ್ಕೆ ನಾಂದಿ ಹಾಡಿತ್ತು. ಅದಕ್ಕೆ ತಕ್ಕ ತಿರುಗೇಟು ನೀಡಿದ ಭಾರತ ಸರ್ಕಾರ ಹಂಗಾಮಿ ಹೈಕಮಿನಷರ್ ಸೇರಿದಂತೆ ಕೆನಡಾದ ಆರು ರಾಜತಾಂತ್ರಿಕರನ್ನು ವಜಾಗೊಳಿಸಿ, ಜಾಗ ಖಾಲಿ ಮಾಡುವಂತೆ ಗಡುವು ನೀಡಿತ್ತು. ಇದೀಗ ದ್ವಿಪಕ್ಷೀಯ ರಾಜತಾಂತ್ರಿಕ ಸಭೆ ನಡೆದಿದ್ದು ಕೆನಡಾ ಸರ್ಕಾರಕ್ಕೆ ಭಾರತ ಕೊನೆಯ ಎಚ್ಚರಿಕೆ ನೀಡಿದೆ. ಆದರೂ ಎಚ್ಚೆತ್ತುಕೊಳ್ಳದ ಕೆನಡಾ, ಭಾರತದ ಮೇಲೆ ನಿರಂತರ ಆರೋಪ ಮಾಡುತ್ತಾ ಬಂದಿದೆ.
ಇದನ್ನೂ ಓದಿ : Hindu Janajagruti Samiti: ಕೆನಡಾದ ಹಿಂದೂ ದೇವಸ್ಥಾನದ ಮೇಲೆ ದಾಳಿ; ಕಠಿಣ ಕ್ರಮಕ್ಕೆ ಆಗ್ರಹ