Friday, 22nd November 2024

ಕೆನಡಾ ಪ್ರಜೆಗಳಿಗೆ ವೀಸಾ ಸೇವೆ ಸ್ಥಗಿತ

ವದೆಹಲಿ: ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿಕೆ ನೀಡಿದ್ದು, ಭಾರತ ಹಾಗೂ ಕೆನಡಾ ನಡುವಿನ ಸಂಘರ್ಷಕ್ಕೆ ದಾರಿ ಮಾಡಿ ಕೊಟ್ಟಿದೆ. ಈಗ ಭಾರತವು ಕೆನಡಾ ಪ್ರಜೆಗಳಿಗೆ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿದೆ.

ಕೆನಡಾದಲ್ಲಿನ ಭಾರತದ ರಾಜತಾಂತ್ರಿಕರು ಹಾಗೂ ಪ್ರಜೆಗಳ ಸುರಕ್ಷತೆಯನ್ನು ಕಾಪಾಡುವುದಾಗಿ ಅಲ್ಲಿನ ಸರ್ಕಾರ ಹೇಳಿದ್ದರೂ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಕ್ರಮವನ್ನು ತೆಗೆದುಕೊಂಡಿದೆ. ಉಭಯ ದೇಶಗಳ ನಡುವಿನ ಉದ್ವಿಗ್ನತೆ ಶಮನವಾಗುವವರೆಗೂ ಅನಿರ್ದಿಷ್ಟಾವಧಿಗೆ ವೀಸಾ ಸೇವೆಗಳನ್ನು ಸ್ಥಗಿತ ಗೊಳಿಸಲಾಗಿದೆ ಎಂದು ಭಾರತ ಸರ್ಕಾರ ತಿಳಿಸಿದೆ.

ಎರಡೂ ದೇಶಗಳು ಹಿರಿಯ ರಾಜತಾಂತ್ರಿಕರನ್ನು ಉಚ್ಚಾಟಿಸಿದ ನಂತರ ಈ ಮಹತ್ವದ ನಿರ್ಧಾರವನ್ನು ಭಾರತ ತೆಗೆದುಕೊಂಡಿದೆ. ಕೆನಡಾದಲ್ಲಿನ ವೀಸಾ ಅರ್ಜಿ ಕೇಂದ್ರಗಳನ್ನು ನಡೆಸುತ್ತಿರುವ ಬಿಎಲ್‌ಎಸ್‌ ಇಂಟರ್‌ನ್ಯಾಶನಲ್ ತನ್ನ ವೆಬ್‌ಸೈಟ್‌ನಲ್ಲಿ ಈ ಸಂದೇಶವನ್ನು ಪ್ರಕಟಿಸಿದೆ.

‘ಸೆಪ್ಟೆಂಬರ್‌ 21 ರಿಂದ ಜಾರಿಗೆ ಬರುವಂತೆ, ಮುಂದಿನ ಸೂಚನೆ ಬರುವವರೆಗೆ ಭಾರತೀಯ ವೀಸಾ ಸೇವೆ ಗಳನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಭಾರತ ಸರ್ಕಾರ ತಿಳಿಸಿದೆ ಎಂದು ಅದು ಹೇಳಿದೆ.

ಕೋವಿಡ್ -19 ಸಾಂಕ್ರಾಮಿಕದ ನಂತರ ಭಾರತವು ವೀಸಾಗಳನ್ನು ಅಮಾನತುಗೊಳಿಸಿರುವುದು ಇದೇ ಮೊದಲು.