Friday, 25th October 2024

Canadian Diplomat : ಭಾರತದ ವಿರುದ್ಧ ಸುಳ್ಳು ಆರೋಪ, ಕೆನಡಾ ರಾಯಭಾರಿಗೆ ಸಮನ್ಸ್

Canadian Diplomat

ಬೆಂಗಳೂರು: ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ತನಿಖೆಯಲ್ಲಿ ಭಾರತೀಯ ಹೈಕಮಿಷನರ್ ಮತ್ತು ಇತರ ರಾಜತಾಂತ್ರಿಕರ ವಿರುದ್ಧ ಕೆನಡಾ ಮಾಡಿರುವ ಮಿಥ್ಯಾರೋಪಗಳನ್ನು ಭಾರತ ಖಂಡಿಸಿದ್ದು ಈ ಬಗ್ಗೆ ಅಲ್ಲಿನ ರಾಯಭಾರಿಗಳ ಮೂಲಕ ಅಸಮಾಧಾನ ವ್ಯಕ್ತಪಡಿಸಿದೆ. ಕೆನಡಾದ ಕ್ರಮದ ಬಗ್ಗೆ ವಿವರಣೆ ನೀಡಲು ಭಾರತದಲ್ಲಿನ ಕೆನಡಾದ (Canadian Diplomat) ಉಪ ಹೈಕಮಿಷನರ್ ಸ್ಟೀವರ್ಟ್ ವೀಲರ್ ಅವರಿಗೆ ವಿದೇಶಾಂಗ ಸಚಿವಾಲಯ ಸಮನ್ಸ್ ನೀಡಿದೆ.

ನಿಜ್ಜರ್ ಹತ್ಯೆ ಪ್ರಕರಣದ ತನಿಖೆಯಲ್ಲಿ ಭಾರತದ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ ಅವರನ್ನು ‘ಹಿತಾಸಕ್ತಿಯ ವ್ಯಕ್ತಿ’ ಎಂದು ಕೆನಡಾ ಸೋಮವಾರ ಹೇಳಿತ್ತು. ಇದಕ್ಕೆ ಭಾರತ ಖಂಡನೆ ವ್ಯಕ್ತಪಡಿಸಿದೆ. ಪ್ರಧಾನಿ ಜಸ್ಟಿನ್ ಟ್ರುಡೊ ಅವರು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಕೆನಡಾದ ನೆಲದಲ್ಲಿ ಪ್ರತ್ಯೇಕತಾವಾದಿ ಉಗ್ರರನ್ನು ನಿಭಾಯಿಸಲು ನೆರವು ನೀಡುತ್ತಿಲ್ಲ ಎಂದು ಭಾರತ ಆರೋಪಿಸಿದೆ.

ಪದೇ ಪದೇ ಮನವಿ ಮಾಡಿದರೂ ನಿಜ್ಜರ್ ಹತ್ಯೆಯಲ್ಲಿ ಭಾರತ ಭಾಗಿಯಾಗಿರುವ ಆರೋಪಗಳಿಗೆ ಕೆನಡಾ ಸರ್ಕಾರ ಯಾವುದೇ ಪುರಾವೆಗಳನ್ನು ಹಂಚಿಕೊಂಡಿಲ್ಲ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಭಾರತೀಯ ಹೈಕಮಿಷನರ್ ಮತ್ತು ಇತರ ರಾಜತಾಂತ್ರಿಕರನ್ನು ಕೆನಡಾದಲ್ಲಿನ ತನಿಖೆಗೆ ಸಂಬಂಧಿಸಿದ ವಿಷಯದಲ್ಲಿ ‘ಹಿತಾಸಕ್ತಿಯ ವ್ಯಕ್ತಿಗಳು’ ಎಂಬ ಹೇಳಿಕೆಯನ್ನು ನಾವು ನಿನ್ನೆ ಕೆನಡಾದಿಂದ ಸ್ವೀಕರಿಸಿದ್ದೇವೆ. ಭಾರತ ಸರ್ಕಾರವು ಈ ಅಸಂಬದ್ಧ ಆರೋಪಗಳನ್ನು ಬಲವಾಗಿ ತಿರಸ್ಕರಿಸುತ್ತದೆ. ವೋಟ್ ಬ್ಯಾಂಕ್ ರಾಜಕೀಯವನ್ನು ಕೇಂದ್ರೀಕರಿಸಿದ ಟ್ರುಡೊ ಸರ್ಕಾರದ ರಾಜಕೀಯ ಕಾರ್ಯಸೂಚಿಯಾಗಿದೆ ಎಂದು ಭಾರತ ಹೇಳಿದೆ.

ಇದನ್ನೂ ಓದಿ: Pooja Bhatt : ಮೆಟ್ರೊದಲ್ಲಿ ಜೈಶ್ರೀರಾಮ್ ಘೋಷಣೆ; ಸಾರ್ವಜನಿಕ ಸ್ಥಳದಲ್ಲಿ ಇದೆಲ್ಲ ನಿಷಿದ್ಧ ಎಂದ ನಟಿ ಪೂಜಾ ಭಟ್‌!

ಸೆಪ್ಟೆಂಬರ್ 2023 ರಲ್ಲಿ ಪ್ರಧಾನಿ ಟ್ರುಡೋ ಕೆಲವು ಆರೋಪಗಳನ್ನು ಮಾಡಿದ್ದರು. ನಮ್ಮ ಕಡೆಯಿಂದ ಅನೇಕ ವಿನಂತಿಗಳನ್ನು ಕಳುಹಿಸಿದ ಹೊರತಾಗಿಯೂ ಭಾರತ ಸರ್ಕಾರಕ್ಕೆ ಸಣ್ಣ ಪುರಾವೆ ಹಂಚಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ತನಿಖೆಯ ನೆಪದಲ್ಲಿ, ರಾಜಕೀಯ ಲಾಭಕ್ಕಾಗಿ ಭಾರತಕ್ಕೆ ಮಸಿ ಬಳಿಯುವ ಉದ್ದೇಶಪೂರ್ವಕ ತಂತ್ರವಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ” ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಅವರು ಕೆನಡಾದ ನೆಲದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಸರ್ಕಾರಿ ಏಜೆಂಟರು ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲಿಂದ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಹದಗೆಟ್ಟವು. ಭಾರತ ಆ ಆರೋಪಗಳನ್ನು ” ಅಸಂಬದ್ಧ” ಎಂದು ತಿರಸ್ಕರಿಸಿ ಸಾಕ್ಷಿಗಳನ್ನು ಕೇಳಿತ್ತು.