ನವದೆಹಲಿ: ಆಸ್ಪತ್ರೆಗಳಲ್ಲಿ ದಾದಿಯರು ಮಲಯಾಳಂ ಮಾತನಾಡಬಾರದು. ಹಿಂದಿ ಅಥವಾ ಇಂಗ್ಲಿಷ್‌ನಲ್ಲೇ ಮಾತನಾಡಬೇಕು ಎಂದು ಸೂಚನೆ ನೀಡಿದ್ದ ದೆಹಲಿ ಸರ್ಕಾರದ ಅಧೀನದ ಜಿ.ಬಿ.ಪಂತ್ ಆಸ್ಪತ್ರೆ ನಡೆ ತೀವ್ರ ಆಕ್ರೋಶಕ್ಕೆ ಗುರಿಯಾಗಿ, ಅಂತಿಮವಾಗಿ ಸುತ್ತೋಲೆಯನ್ನು ರದ್ದು ಮಾಡಿದೆ.
‘ನಮ್ಮ ಗಮನಕ್ಕೆ ಬಾರದಂತೆ ಈ ಸುತ್ತೋಲೆ ಹೊರಡಿಸಲಾಗಿದೆ,’ ಎಂದು ಗೋವಿಂದ್ ವಲ್ಲಭ ಪಂತ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋ ಧನಾ (ಜಿಐಪಿಎಂಇಆರ್) ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಲಯಾಳಂ ಭಾಷಿಕ ಸಿಬ್ಬಂದಿ ನೀಡಿದ ದೂರಿನ ಆಧಾರದ ಮೇಲೆ ದೆಹಲಿ ಆರೋಗ್ಯ ಇಲಾಖೆ ಆಸ್ಪತ್ರೆಗೆ ಎಚ್ಚರಿಕೆ ನೀಡಿದೆ ಎಂದು ವರದಿ ಮಾಡಿದೆ.
ಸುತ್ತೋಲೆಯ ವಿರುದ್ಧ ಮಲಯಾಳಂ ಶುಶ್ರೂಷಕರ ಸಂಘದಿಂದ ಆಕ್ರೋಶ ವ್ಯಕ್ತವಾಗಿತ್ತು. ದೇಶದಾದ್ಯಂತ ವಿವಿಧ ಆಸ್ಪತ್ರೆ ಗಳಲ್ಲಿ ಕೇರಳ ಮೂಲದ ದಾದಿ ಯರು ಸೇವೆ ಸಲ್ಲಿಸುತ್ತಿದ್ದಾರೆ. ಮಲಯಾಳಂ ಅವರ ಮಾತೃಭಾಷೆ ಎಂದು ಸಂಘ ನೆನಪಿಸಿತ್ತು.
ಮಲಯಾಳಂ ಬಳಸದಂತೆ, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಮಾತನಾಡುವಂತೆ ದೆಹಲಿಯ ಜಿ.ಬಿ.ಪಂತ್ ಸರ್ಕಾರಿ ಆಸ್ಪತ್ರೆ ಹೊರಡಿಸಿದ್ದ ಸುತ್ತೋಲೆಯು ಸಾಮಾಜಿಕ ತಾಣದಲ್ಲಿ ಭಾನುವಾರ ಬಿರುಗಾಳಿ ಎಬ್ಬಿಸಿತು. ಆಸ್ಪತ್ರೆ ನಡೆಯನ್ನು ಪ್ರಶ್ನಿಸಿ ಟ್ವೀಟ್ ಮಾಡಿದರು. #Malayalam ಹ್ಯಾಷ್ ಟ್ಯಾಗ್ ಭಾನುವಾರ ಬೆಳಗ್ಗೆ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿತ್ತು.