3,000 ಗರ್ಭಿಣಿಯರ ಪೈಕಿ ಒಬ್ಬರಿಗೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಗರ್ಭಾವಸ್ಥೆಯಲ್ಲಿ ಸ್ತನ ಕ್ಯಾನ್ಸರ್‌ಗೆ ಒಳಗಾದರೆ ಅದನ್ನು ಪತ್ತೆ ಹಚ್ಚುವುದು ಬಹಳ ಕಷ್ಟದ ಕೆಲಸ. ಏಕೆಂದರೆ ಗರ್ಭಾವಸ್ಥೆಯಲ್ಲಿ ಸ್ತನದಲ್ಲಿ ಹಲವು ಬದಲಾವಣೆಗಳಾಗುವುದರಿಂದ ಅದನ್ನು ಗರ್ಭಾವಸ್ಥೆಯ ಲಕ್ಷಣವೆಂದು ನಿರ್ಲಕ್ಷಿಸುತ್ತಾರೆ. ಆದರೆ ಇದು ತಾಯಿಯ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ ಬೆಳೆಯುತ್ತಿರುವ ಭ್ರೂಣಕ್ಕೂ ಅಪಾಯವನ್ನುಂಟುಮಾಡುತ್ತದೆ. ಹಾಗಾಗಿ ಗರ್ಭಾವಸ್ಥೆಯಲ್ಲಿ ಸ್ತನಕ್ಯಾನ್ಸರ್(Cancer Care) ಇರುವುದನ್ನು ಪತ್ತೆ ಮಾಡಿ ಸರಿಯಾದ ಚಿಕಿತ್ಸೆ ಪಡೆಯಿರಿ. ಅದಕ್ಕೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿ ಇಲ್ಲಿದೆ.
ಗರ್ಭಾವಸ್ಥೆಯಲ್ಲಿ ಸ್ತನ ಕ್ಯಾನ್ಸರ್ ಲಕ್ಷಣಗಳು
ಗರ್ಭಾವಸ್ಥೆಯಲ್ಲಿ ಸ್ತನ ಕ್ಯಾನ್ಸರ್ ಅನ್ನು ಪತ್ತೆಹಚ್ಚುವುದು ಕಷ್ಟದ ಕೆಲಸವಾಗಿದೆ. ಗರ್ಭಾವಸ್ಥೆಯಲ್ಲಿ ಹಾರ್ಮೋನುಗಳ ಬದಲಾವಣೆಗಳು ಹೆಚ್ಚಾಗಿ ಆಗುವುದರಿಂದ ಸ್ತನಗಳ ಗಾತ್ರ ದೊಡ್ಡದಾಗುತ್ತದೆ. ಹಾಗಾಗಿ ಸ್ಪರ್ಶಿಸಿ ಗಡ್ಡೆಗಳನ್ನು ಕಂಡುಹಿಡಿಯುವುದು ಹೆಚ್ಚು ಕಷ್ಟಕರವಾಗುತ್ತದೆ. ಸ್ತನಗಳ ಮೃದುತ್ವ, ಊತ ಅಥವಾ ಗಡ್ಡೆಯಂತಹ ಬದಲಾವಣೆಗಳು ಸಾಮಾನ್ಯವಾಗಿ ಗರ್ಭಧಾರಣೆಯ ಲಕ್ಷಣಗಳಾಗಿವೆ. ಆದರೆ ಗರ್ಭಿಣಿಯರು ಯಾವುದೇ ಅಸಾಮಾನ್ಯ ಸ್ತನ ಬದಲಾವಣೆಗಳನ್ನು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಇದನ್ನು ಆರಂಭಿಕವಾಗಿ ಪತ್ತೆ ಮಾಡಿ ಚಿಕಿತ್ಸೆ ಪಡೆದರೆ ತಾಯಿ ಮತ್ತು ಮಗು ಇಬ್ಬರಿಗೂ ಅಪಾಯವಾಗುವುದನ್ನು ತಡೆಯಬಹುದು.
ಸ್ತನ ಕ್ಯಾನ್ಸರ್ ಹೊಂದಿರುವ ಗರ್ಭಿಣಿರಿಗೆ ಯಾವ ಚಿಕಿತ್ಸೆ ಉತ್ತಮ?
ಶಸ್ತ್ರಚಿಕಿತ್ಸೆ
ಗರ್ಭಾವಸ್ಥೆಯಲ್ಲಿ ಸ್ತನ ಕ್ಯಾನ್ಸರ್ ಇದ್ದರೆ ಶಸ್ತ್ರಚಿಕಿತ್ಸೆಯ ಮೂಲಕ ಕ್ಯಾನ್ಸರ್ ಅಂಗಾಂಶವನ್ನು ತೊಡೆದುಹಾಕಲು ಲಂಪೆಕ್ಟಮಿ (ಗೆಡ್ಡೆಯನ್ನು ತೆಗೆದುಹಾಕುವುದು) ಅಥವಾ ಮಾಸ್ಟೆಕ್ಟಮಿ (ಸಂಪೂರ್ಣ ಸ್ತನವನ್ನು ತೆಗೆದುಹಾಕುವುದು) ನಡೆಸಲಾಗುತ್ತದೆ. ಶಸ್ತ್ರಚಿಕಿತ್ಸೆಯು ತಾಯಿ ಮತ್ತು ಮಗುವಿಗೆ ಸುರಕ್ಷಿತ ಎನ್ನಲಾಗುತ್ತದೆ. ಹಾಗಾಗಿ ಗರ್ಭಧಾರಣೆಯ ಎರಡನೇ ತ್ರೈಮಾಸಿಕದಲ್ಲಿ ಶಸ್ತ್ರಚಿಕಿತ್ಸೆಯನ್ನು ಸಾಮಾನ್ಯವಾಗಿ ಶಿಫಾರಸು ಮಾಡಲಾಗುತ್ತದೆ, ಏಕೆಂದರೆ ಈ ಸಮಯದಲ್ಲಿ ಭ್ರೂಣಕ್ಕೆ ಅಪಾಯಗಳು ಕಡಿಮೆ.
ಕೀಮೋಥೆರಪಿ
ಸ್ತನ ಕ್ಯಾನ್ಸರ್ ಹೊಂದಿರುವ ಗರ್ಭಿಣಿಯರಿಗೆ, ವಿಶೇಷವಾಗಿ ಮೊದಲ ತ್ರೈಮಾಸಿಕದ ನಂತರ ಅಂದರೆ ಎರಡನೇ ಮತ್ತು ಮೂರನೇ ತ್ರೈಮಾಸಿಕದಲ್ಲಿ ಕೀಮೋಥೆರಪಿ ನೀಡುವುದು ಒಳ್ಳೆಯದು. ಯಾಕೆಂದರೆ ಭ್ರೂಣದ ಅಂಗಗಳು ಮೊದಲ ತ್ರೈಮಾಸಿಕದಲ್ಲಿ ಬೆಳವಣಿಗೆ ಹೊಂದುತ್ತದೆ. ಹಾಗಾಗಿ ಈ ಸಮಯದಲ್ಲಿ ಕೀಮೋಥೆರಪಿಯನ್ನು ಶಿಫಾರಸು ಮಾಡಲಾಗುವುದಿಲ್ಲ.ಇದರಿಂದ ಗರ್ಭಪಾತವಾಗುವ ಸಂಭವವಿದೆ.
ರೇಡಿಯೇಷನ್ ಥೆರಪಿ
ಈ ಥೆರಪಿಯನ್ನು ಮೊದಲ ಎರಡು ತ್ರೈಮಾಸಿಕಗಳಲ್ಲಿ ಮಾಡುವುದಿಲ್ಲ. ಏಕೆಂದರೆ ಇದು ಭ್ರೂಣದ ದೇಹ ಹಾಗೂ ಮೆದುಳಿನ ಬೆಳವಣಿಗೆಯಲ್ಲಿ ಸಮಸ್ಯೆಯನ್ನುಂಟುಮಾಡುತ್ತದೆ. ಅಗತ್ಯವಿದ್ದರೆ, ಅದನ್ನು ಮಗು ಜನಿಸಿದ ನಂತರ ಮಾಡಬಹುದು ಅಥವಾ ಅನಿರ್ವಾಯವಾದಲ್ಲಿ ಮೂರನೇ ತ್ರೈಮಾಸಿಕದಲ್ಲಿ ಬಹಳ ಎಚ್ಚರಿಕೆಯಿಂದ ಮಾಡಬಹುದು.
ಹಾರ್ಮೋನು ಥೆರಪಿ ಮತ್ತು ಟಾರ್ಗೆಟೆಡ್ ಥೆರಪಿ
ಭ್ರೂಣಕ್ಕೆ ಹಾನಿಯಾಗುವ ಹೆಚ್ಚಿನ ಅಪಾಯದ ಕಾರಣದಿಂದಾಗಿ ಹಾರ್ಮೋನು ಥೆರಪಿ ಮತ್ತು ಟಾರ್ಗೆಟೆಡ್ ಥೆರಪಿಯನ್ನು ಗರ್ಭಾವಸ್ಥೆಯಲ್ಲಿ ಶಿಫಾರಸು ಮಾಡಲಾಗುವುದಿಲ್ಲ. ಈ ಚಿಕಿತ್ಸೆಗಳು ಸಾಮಾನ್ಯವಾಗಿ ಹೆರಿಗೆಯ ನಂತರ ಮಾಡಿದರೆ ಒಳ್ಳೆಯದು.
ಇದನ್ನೂ ಓದಿ:ಕಾರಿಡಾರ್‌ನಲ್ಲಿ ನಿಂತಿದ್ದ ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ ಶಿಕ್ಷಕ; ಆಘಾತಕಾರಿ ವಿಡಿಯೊ
ಗರ್ಭಾವಸ್ಥೆಯಲ್ಲಿ ಸ್ತನ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡುವುದು ತಾಯಿ ಮತ್ತು ಬೆಳೆಯುತ್ತಿರುವ ಭ್ರೂಣ ಇಬ್ಬರಿಗೂ ಅಪಾಯಕಾರಿ. ಭ್ರೂಣದ ಹಾನಿಯನ್ನು ಕಡಿಮೆ ಮಾಡಲು ಅನೇಕ ಚಿಕಿತ್ಸೆಗಳನ್ನು ಅಳವಡಿಸಿಕೊಳ್ಳಲಾಗಿದ್ದರೂ, ಹೆರಿಗೆಯ ಬಳಿಕ ಮಾಡಿದರೆ ತುಂಬಾ ಒಳ್ಳೆಯದು.