Thursday, 21st November 2024

ಪೂರ್ವಭಾವಿ ಪರೀಕ್ಷೆ ಮುಂದೂಡುವುದು ಅಸಾಧ್ಯ: ಯುಪಿಎಸ್’ಸಿ

ನವದೆಹಲಿ: ಪ್ರಸಕ್ತ ಸಾಲಿನ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ (2020) ಮುಂದೂಡುವುದು ಅಸಾಧ್ಯ ಎಂದು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಅಕ್ಟೋಬರ್‌ 4ರಂದು ಯುಪಿಎಸ್‌ಸಿ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ ನಿಗದಿಯಾಗಿದೆ. ಕೋವಿಡ್‌-19 ಕಾರಣದಿಂದಾಗಿ ಈ ಬಾರಿಯ ಪರೀಕ್ಷೆಯನ್ನು ಮುಂದೂಡುವಂತೆ ನಾಗರಿಕ ಸೇವೆಗಳ ಆಕಾಂಕ್ಷಿಗಳಲ್ಲಿ ಕೆಲವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್‌ ನೇತೃತ್ವದ ಮೂವರು ನ್ಯಾಯಮೂರ್ತಿಗಳ ನ್ಯಾಯಪೀಠವು ಅರ್ಜಿ ವಿಚಾರಣೆ ನಡೆಸಿದ್ದು, ಸಜ್ಜುಗಳಿಸಲಾಗಿರುವ ಕಾರ್ಯಗಳು ಹಾಗೂ ಇತರೆ ಮಾಹಿತಿಗಳನ್ನು ಒಳಗೊಂಡ ಅಫಿಡವಿಟ್‌ ಸಲ್ಲಿಸುವಂತೆ ಯುಪಿಎಸ್‌ಸಿಗೆ ಸೂಚಿಸಿದೆ. ಸೆಪ್ಟೆಂಬರ್‌ 30ಕ್ಕೆ ವಿಚಾರಣೆ ಮುಂದೂಡಲಾಗಿದೆ. ಈ ವರ್ಷದ ಯುಪಿಎಸ್‌ಸಿ ಪ್ರಿಲಿಮ್ಸ್‌ ಪರೀಕ್ಷೆಗೆ 6 ಲಕ್ಷ ಅಭ್ಯರ್ಥಿ ಗಳು ಹಾಜರಾಗುವ ಸಾಧ್ಯತೆ ಇದೆ. ದೇಶದ 72 ನಗರಗಳಲ್ಲಿ ಹಲವು ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

ಮೇ 31ರಂದು ನಿಗದಿಯಾಗಿದ್ದ ಪರೀಕ್ಷೆಯನ್ನು ಕೋವಿಡ್‌ ಕಾರಣಗಳಿಂದಾಗಿ ಮುಂದೂಡಲಾಗಿತ್ತು. ಜೂನ್‌ 5ರಂದು ಯುಪಿಎಸ್‌ಸಿ ಪರಿಷ್ಕೃತ ಪರೀಕ್ಷಾ ಪಟ್ಟಿ ಪ್ರಕಟಿಸಿತ್ತು.