Friday, 22nd November 2024

ನಿರಾಶ್ರಿತರು, ಭಿಕ್ಷುಕರೂ ದುಡಿಯಲಿ, ಸರ್ಕಾರದಿಂದ ಪ್ರತಿಯೊಂದು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌

ಮುಂಬೈ: ನಿರಾಶ್ರಿತರು, ಭಿಕ್ಷುಕರೂ ದುಡಿಯಬೇಕು. ಅವರಿಗೆ ಅಗತ್ಯವಾಗಿ ಬೇಕಾದ ಆಹಾರ, ನೀರು ಸೇರಿದಂತೆ ಎಲ್ಲ ಸೌಲಭ್ಯಗಳನ್ನು ರಾಜ್ಯ ಸರ್ಕಾರವೇ ಪೂರೈಸಲು ಅಸಾಧ್ಯ ಎಂದು ಬಾಂಬೆ ಹೈಕೋರ್ಟ್‌ ಶನಿವಾರ ಹೇಳಿದೆ.

ಈ ಕುರಿತಂತೆ, ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ, ಮುಖ್ಯ ನ್ಯಾಯ ಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಜಿ.ಎಸ್‌. ಕುಲಕರ್ಣಿ ಅವರಿರುವ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ನಿರಾಶ್ರಿತರು ಮತ್ತು ಭಿಕ್ಷುಕರಿಗೆ ಮೂರು ಹೊತ್ತು ಪೌಷ್ಟಿಕಾಂಶಯುಕ್ತ ಆಹಾರ, ಕುಡಿಯುವ ನೀರು, ವಸತಿ ನೀಡಬೇಕು. ಸಾರ್ವಜನಿಕ ಶೌಚಾಲಯಗಳ ಉಚಿತ ಬಳಕೆಗೆ ಅನುಮತಿ ನೀಡುವಂತೆ ಬೃಹನ್‌ ಮುಂಬೈ ಮಹಾನಗರ ಪಾಲಿಕೆಗೆ ನಿರ್ದೇಶಿಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು.

ಎಲ್ಲರೂ ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ನಿರಾಶ್ರಿತರು ಕೂಡ ದೇಶಕ್ಕಾಗಿ ಕೆಲಸ ಮಾಡಬೇಕು. ಎಲ್ಲವನ್ನೂ ರಾಜ್ಯ ಸರ್ಕಾರ ಪೂರೈಸಲು ಸಾಧ್ಯವಿಲ್ಲ. ಇಂಥ ಮನವಿ ಸಲ್ಲಿಸುವ ಮೂಲಕ, ನೀವು ಈ  ವರ್ಗದ ಜನರ ಸಂಖ್ಯೆಯನ್ನು ಹೆಚ್ಚಿಸುತ್ತಿದ್ದೀರಿ’ ಅರ್ಜಿಯಲ್ಲಿರುವ ಎಲ್ಲ ಬೇಡಿಕೆಗಳಿಗೂ ಒಪ್ಪಿಗೆ ನೀಡಿದರೆ, ಜನರಿಗೆ ಕೆಲಸ ಮಾಡಬೇಡಿ ಎಂದು ಹೇಳಿದಂತಾಗುವುದಿಲ್ಲವೇ’ ಎಂದು ನ್ಯಾಯಪೀಠ ಅರ್ಜಿದಾರರನ್ನೇ ಪ್ರಶ್ನಿಸಿತು.

ಸಾರ್ವಜನಿಕ ಶೌಚಾಲಯಗಳ ಬಳಕೆಗೆ ಕನಿಷ್ಠ ಶುಲ್ಕವನ್ನು ವಿಧಿಸಲಾಗುತ್ತಿದೆ. ಆದರೆ ನಿರಾಶ್ರಿತರು ಶೌಚಾಲಯವನ್ನು ಉಚಿತವಾಗಿ ಬಳಸಲು ಅವಕಾಶ ನೀಡಿ’ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.