Friday, 22nd November 2024

Carbon Credit: ಎಂಟು ರಾಜ್ಯಗಳ ರೈತರಿಗೆ ಸಿಗಲಿದೆ ಕಾರ್ಬನ್ ಕ್ರೆಡಿಟ್; ಏನಿದು ಕೇಂದ್ರ ಸರ್ಕಾರದ ಯೋಜನೆ?

Carbon Credit

ಕೈಗಾರಿಕೆಗಳಿಂದ ಹೊರಸೂಸುವ ಇಂಗಾಲದಿಂದ (Carbon) ಉಂಟಾಗುವ ವಿಷಯುಕ್ತ ಗಾಳಿಯನ್ನು ಎದುರಿಸಲು ಹೆಚ್ಚು ಹೆಚ್ಚು ಮರ- ಗಿಡಗಳನ್ನು ಬೆಳೆಸುವ ಕಾರ್ಯ ದೇಶದ ವಿವಿಧ ಭಾಗಗಳಲ್ಲಿ ನಡೆಸಲಾಗುತ್ತಿದೆ. ಹೀಗೆ ಪರಿಸರವನ್ನು ಶುದ್ಧವಾಗಿಡುವ ಪ್ರಯತ್ನ ಮಾಡುತ್ತಿರುವವರಿಗೆ ಕೃಷಿ ಸಚಿವಾಲಯದಿಂದ (Ministry of Agriculture) ಕಾರ್ಬನ್ ಕ್ರೆಡಿಟ್ (Carbon Credit) ನೀಡಲಾಗುಟ್ಟಿದ್ದು, ಇದೇ ಮೊದಲ ಬಾರಿಗೆ ದೇಶದ ಎಂಟು ರಾಜ್ಯಗಳ ರೈತರು ಇದಕ್ಕೆ ಅರ್ಹತೆ ಪಡೆದಿದ್ದಾರೆ.

ಪರಿಸರ ಸ್ನೇಹಿ ಕೃಷಿ ಪದ್ದತಿಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುತ್ತಿರುವ ಕೃಷಿ ಸಚಿವಾಲಯವು ನೀಡುವ ಕಾರ್ಬನ್ ಕ್ರೆಡಿಟ್‌ನಿಂದ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಸಾಕಷ್ಟು ಪ್ರಯೋಜನವಾಗಲಿದೆ. ಇದೇ ಮೊದಲ ಬಾರಿಗೆ ಉತ್ತರ ಪ್ರದೇಶ, ಮಧ್ಯಪ್ರದೇಶ, ಹರಿಯಾಣ, ಪಂಜಾಬ್ ಮತ್ತು ಮಹಾರಾಷ್ಟ್ರ ಸೇರಿದಂತೆ ಎಂಟು ರಾಜ್ಯಗಳ ಸಣ್ಣ ಹಿಡುವಳಿದಾರ ರೈತರಿಗೆ ಶೀಘ್ರದಲ್ಲೇ ಕಾರ್ಬನ್ ಕ್ರೆಡಿಟ್‌ನೊಂದಿಗೆ ಆರ್ಥಿಕವಾಗಿ ಬಹುಮಾನ ನೀಡಲಾಗುತ್ತದೆ.

ಉಮಂಗ್ ಅಗರ್ವಾಲ್, ಕಾರ್ಬನ್, ಗ್ರೋ ಇಂಡಿಗೋ, ದೇಶೀಯ ಸೀಡ್ ಮೇಜರ್ ಮಹಿಕೊ ಮತ್ತು ಯುಎಸ್ ಮೂಲದ ಇಂಡಿಗೋ ಲೆಕ್ಕಾಚಾರದ ಪ್ರಕಾರ ಕಾರ್ಬನ್ ಸ್ಟ್ಯಾಂಡರ್ಡ್ (ವೀರಾ) ಪ್ರೋಟೋಕಾಲ್ ಅಡಿಯಲ್ಲಿ ಜಾಗತಿಕ ಸ್ವಯಂ ಪ್ರೇರಿತ ಹಸಿರು ಮನೆ ಅನಿಲ (GHG) ಕಡಿತ ಕಾರ್ಯಕ್ರಮದ ಭಾಗವಾಗಿ ಮೊದಲ ಕೃಷಿ ಕಾರ್ಬನ್ ಕಾರ್ಯಕ್ರಮದ ಲೆಕ್ಕ ಪೂರ್ಣಗೊಂಡಿದೆ.

Carbon Credit

ವೀರಾ ಪ್ರಮಾಣೀಕರಣದ ಆಧಾರದ ಮೇಲೆ ರೈತರಿಗೆ ಕೆಲವೇ ತಿಂಗಳುಗಳಲ್ಲಿ ಕಾರ್ಬನ್ ಕ್ರೆಡಿಟ್ ನೀಡಲಾಗುತ್ತದೆ. ಮೊದಲ ಹಂತದ ಪರಿಶೀಲನೆ ಕಾರ್ಯ ಪೂರ್ಣಗೊಂಡಿದೆ. ಕ್ರೆಡಿಟ್ ವಿತರಣೆಗಾಗಿ ವೀರಾ ಪರಿಶೀಲನೆ ನಡೆಸುತ್ತಿದೆ ಎಂದು ಗ್ರೋ ಇಂಡಿಯಾದ ಅಗರ್ವಾಲ್ ಹೇಳಿದ್ದಾರೆ.

ಕಾರ್ಬನ್ ಕ್ರೆಡಿಟ್ ಯೋಜನೆಯಲ್ಲಿ ಸಣ್ಣ ರೈತರಿಗೆ ಪ್ರೋತ್ಸಾಹ ನೀಡುವ ಯೋಜನೆಯಾಗಿದೆ. ಇದರಲ್ಲಿ ಅಕ್ಕಿ, ಗೋಧಿ, ಹತ್ತಿ, ಮೆಕ್ಕೆಜೋಳ, ಕಬ್ಬು ಬೆಳೆಗಾರರು ಸೇರಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಹರಿಯಾಣ, ಪಂಜಾಬ್, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಆಂಧ್ರಪ್ರದೇಶ ಮತ್ತು ತೆಲಂಗಾಣದ 80,000 ರೈತರು ವಿವಿಧ ಕಾರ್ಬನ್ ಕಾರ್ಯಕ್ರಮಗಳಲ್ಲಿ 40,000 ಹೆಕ್ಟೇರ್‌ನಲ್ಲಿ ವೈವಿಧ್ಯಮಯ ಬೆಳೆಗಳನ್ನು ಬೆಳೆಸಿದ್ದಾರೆ. ಕೃಷಿ ತಂತ್ರಗಳನ್ನು ಅಳವಡಿಸಿಕೊಂಡಿರುವ ರೈತರು ನೀರು, ಮಣ್ಣಿನ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಿದ್ದಾರೆ.

ರೈತರಿಗೆ ಪಾಲು

ರೈತರಿಗೆ ನೀಡಲಾಗುವ ಕಾರ್ಬನ್ ಕ್ರೆಡಿಟ್‌ಗಳನ್ನು ಕೈಗಾರಿಕೆಗಳು ಖರೀದಿಸಬಹುದು. ವಿಶೇಷವಾಗಿ ಇಂಗಾಲ ಉತ್ಪಾದನೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲದ ಉದ್ಯಮಗಳಾದ ವಿಮಾನಯಾನ, ಗಣಿಗಾರಿಕೆ ಅಥವಾ ರಸಗೊಬ್ಬರ ತಯಾರಕರು ರೈತರ ಕಾರ್ಬನ್ ಕ್ರೆಡಿಟ್ ಗಳನ್ನು ಮಾರಾಟ ಮಾಡಿ ಗಳಿಸಿದ ಆದಾಯದಿಂದ ಶೇ. 75ರಷ್ಟನ್ನು ರೈತರಿಗೆ ಹಿಂತಿರುಗಿಸುತ್ತದೆ.

ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯು, ಪರಿಸರ ಸ್ನೇಹಿ ಕೃಷಿ ಪದ್ದತಿಯ ಮೌಲ್ಯ ಮಾಪನಕ್ಕೆ ರೈತರು ನೋಂದಾಯಿಸಿದ ಕೃಷಿ ಭೂಮಿಯ ಉಪಗ್ರಹ ಮೇಲ್ವಿಚಾರಣೆಗಾಗಿ ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನವನ್ನು ಬಳಸುತ್ತಿದೆ.

Carbon Credit

ಪ್ರವಾಹಕ್ಕೆ ಒಳಗಾದ ಭತ್ತದ ಗದ್ದೆಗಳಲ್ಲಿನ ಸೂಕ್ಷ್ಮಜೀವಿಗಳು ಮೀಥೇನ್ ಅನ್ನು ಉತ್ಪಾದಿಸುತ್ತವೆ. ಅವುಗಳಲ್ಲಿ ಕೆಲವು ವಾತಾವರಣಕ್ಕೆ ಸೇರುತ್ತವೆ. ‘ಗುಡ್ ರೈಸ್ ಅಲೈಯನ್ಸ್’ ಅನ್ನು ರಚಿಸಿರುವ ಅಗ್ರಿ ಮೇಜರ್ ಬೈಯರ್, ಶೆಲ್, ಮಿತ್ಸುಬಿಷಿ ಮತ್ತು ಜೆನ್‌ಝೀರೊ ಒಂಬತ್ತು ರಾಜ್ಯಗಳಲ್ಲಿ ತಮ್ಮ ಭತ್ತದ ರೈತರಿಗೆ ಸ್ಮಾರ್ಟ್ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ತಮ್ಮ ಕಾರ್ಬನ್ ಕ್ರೆಡಿಟ್ ಕಾರ್ಯಕ್ರಮವನ್ನು ಹೆಚ್ಚಿಸಲು ನಿರ್ಧರಿಸಿದ್ದಾರೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಈ ಕಾರ್ಯಕ್ರಮದ ಅಡಿಯಲ್ಲಿ ಸುಮಾರು 8,500 ಹೆಕ್ಟೇರ್‌ಗಳನ್ನು ಸೇರಿಸಲು ಯೋಜನೆ ರೂಪಿಸಲಾಗಿದೆ. ಕಳೆದ ಒಂದು ವರ್ಷದಲ್ಲಿ ಯೋಜನೆಯು ಕೃಷಿಯಿಂದ ವಾರ್ಷಿಕವಾಗಿ ಸುಮಾರು 1,00,000 ಟನ್‌ಗಳಷ್ಟು ಇಂಗಾಲದ ಡೈಆಕ್ಸೈಡ್ ಸಮಾನವಾದ (tCO2e) ಮೀಥೇನ್ ಹೊರಸೂಸುವಿಕೆ ಕಡಿತವನ್ನು ಮಾಡಿದೆ. ಇದು 10,000 ರೈತರಿಗೆ ಪ್ರಯೋಜನವನ್ನು ನೀಡಿದೆ. ಪ್ರಮುಖವಾಗಿ ಅಕ್ಕಿ ಉತ್ಪಾದಿಸುವ ರಾಜ್ಯಗಳಾದ ಆಂಧ್ರಪ್ರದೇಶ, ಬಿಹಾರ, ಹರಿಯಾಣ, ಕರ್ನಾಟಕ, ಒಡಿಶಾ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ 25,000 ಹೆಕ್ಟೇರ್‌ಗೂ ಹೆಚ್ಚು ಪ್ರದೇಶವನ್ನು ಒಳಗೊಂಡಿದೆ.

Indian Economy : 2025ರಲ್ಲಿ ಭಾರತದ ಆರ್ಥಿಕತೆ ಶೇ.7ರಿಂದ 7.2ರಷ್ಟು ಬೆಳವಣಿಗೆ: ಡೆಲಾಯ್ಟ್ ವರದಿ

ಪ್ರಮುಖವಾಗಿ ಭತ್ತ ಬೆಳೆಯುವ ಪ್ರದೇಶಗಳ ರೈತರು ಸುಸ್ಥಿರ ಅಭ್ಯಾಸಗಳನ್ನು ಅಳವಡಿಸಿಕೊಂಡರೆ ಕಾರ್ಬನ್ ಕ್ರೆಡಿಟ್ ಗಳಿಸಬಹುದು. ಇದು ಹಸಿರು ಮನೆ ಅನಿಲಗಳಲ್ಲಿ ಕಡಿತ ಮತ್ತು ಮಣ್ಣಿನ ಇಂಗಾಲದ ಹೊರಸೂಸಿವಿಕೆಯನ್ನು ಕಡಿಮೆ ಮಾಡುತ್ತದೆ.