Friday, 22nd November 2024

ಹಾಕಿ ಆಟಗಾರ್ತಿ ಜಾತಿ ನಿಂದನೆ ಪ್ರಕರಣ: ಮತ್ತೋರ್ವ ಬಂಧನ

ಹರಿದ್ವಾರ: ರಾಷ್ಟ್ರೀಯ ಮಹಿಳಾ ಹಾಕಿ ತಂಡದ ಆಟಗಾರ್ತಿ ವಂದನಾ ಕಟಾರಿಯಾ ಕುಟುಂಬಸ್ಥರಿಗೆ ಜಾತಿ ನಿಂದನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವನನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇದರೊಂದಿಗೆ ಮೂವರನ್ನು ಬಂಧಿಸಿದಂತಾ ಗಿದೆ.

ಶನಿವಾರ ಸುಮಿತ್ ಚೌವ್ಹಾಣ್ ಎಂಬುವರನ್ನು ಬಂಧಿಸಲಾಗಿದೆ. ಆತನ ಬಂಧನದೊಂದಿಗೆ ಈ ಪ್ರಕರಣದಲ್ಲಿ ಈವರೆಗೂ ಮೂವರನ್ನು ಬಂಧಿಸಲಾಗಿದೆ. ಈ ಹಿಂದೆ ವಿಜಯ್ ಪಾಲ್ ಹಾಗೂ ಆತನ ಸಹೋದರ್ ಅಂಕೂರ್ ಪಾಲ್ ಎಂಬವರನ್ನು ಬಂಧಿಸಲಾಗಿತ್ತು ಎಂದು ಹರಿದ್ವಾರ ಎಸ್ ಎಸ್ ಪಿ ಸೆಂಥಿಲ್ ಅವೊದಾಯಿ ಕೃಷ್ಣ ರಾಜ್ ಎಸ್ ತಿಳಿಸಿದ್ದಾರೆ.

ಬಂಧಿತರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಬಂಧಿತರು ಒಲಂಪಿಕ್ಸ್ ಸೆಮಿಫೈನಲ್ ನಲ್ಲಿ ಅರ್ಜೆಂಟಿನಾ ವಿರುದ್ಧ ಭಾರತೀಯ ಮಹಿಳಾ ತಂಡ ಸೋತ ನಂತರ ವಂದನಾ ಮನೆಯ ಮುಂದೆ ಪಟಾಕಿ ಸಿಡಿಸಿ, ಅವಹೇಳನಕಾರಿ ಮಾತುಗಳನ್ನಾಡಿ ದ್ದರು. ಅಲ್ಲದೇ, ದಲಿತ ಆಟಗಾರ್ತಿಯರು ಹಾಕಿ ತಂಡದಲ್ಲಿದ್ದರಿಂದ ಸೋಲಿಗೆ ಕಾರಣವಾಯಿತು ಎಂದು ಕುಟುಂಬಸ್ಥರನ್ನು ಜಾತಿ ನಿಂದನೆ ಮಾಡಲಾಗಿದೆ ಎಂದು ಆರೋಪ ಕೇಳಿಬಂದಿತ್ತು.

ವಂದನಾ ಕಟಾರಿಯಾ ಕುಟುಂಬಸ್ಥರ ಮನೆಯ ಮುಂದೆ ಪೊಲೀಸರನ್ನು ನಿಯೋಜಿಸಲಾಗಿದೆ. ಒಲಂಪಿಕ್ಸ್ ನಲ್ಲಿ ಅತ್ಯುತ್ತಮ ಪ್ರದರ್ಶನಕ್ಕಾಗಿ ವಂದನಾ ಕಟಾರಿಯಾ ಅವರಿಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ದಾಮಿ 25 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ.