Thursday, 12th September 2024

ವಸತಿ ಕಟ್ಟಡದಲ್ಲಿ ಅಗ್ನಿ ಅವಘಡ: ಏಳು ಮಂದಿ ಸಾವು

ಇಂದೋರ್‌: ಮಧ್ಯಪ್ರದೇಶದ ಇಂದೋರ್‌ನ ವಿಜಯನಗರ ಪ್ರದೇಶದ ಎರಡು ಅಂತಸ್ತಿನ ವಸತಿ ಕಟ್ಟಡ ದಲ್ಲಿ ಅಗ್ನಿ ಅವಘಡ ಸಂಭವಿಸಿ, ಏಳು ಮಂದಿ  ಮೃತಪಟ್ಟಿದ್ದಾರೆ. ಸುಟ್ಟ ಗಾಯಗಳಾಗಿದ್ದ 11 ಮಂದಿ ಯನ್ನು ರಕ್ಷಿಸಲಾಗಿದೆ.

ಎಲೆಕ್ಟ್ರಿಕ್ ಮೀಟರ್‌ನಲ್ಲಿನ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡು, ವಸತಿ ಸಂಕೀರ್ಣದ ಪಾರ್ಕಿಂಗ್‌ನಲ್ಲಿದ್ದ ವಾಹನಗಳಿಗೂ ಆವರಿಸಿದೆ ಎಂದು ವಿಜಯನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ. ಸದ್ಯ, ಬೆಂಕಿ ನಿಯಂತ್ರಣಕ್ಕೆ ಬಂದಿದ್ದು, ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಘಟನೆ ಕುರಿತಂತೆ ತನಿಖೆಗೆ ಆದೇಶಿಸಿರುವ ಅವರು, ನಿರ್ಲಕ್ಷ್ಯ ತೋರಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.