ಡೋಡಾ: ಜಮ್ಮು ಮತ್ತು ಕಾಶ್ಮೀರದ ಡೋಡಾ ಜಿಲ್ಲೆಯ ಸೇನಾ ಕ್ಯಾಂಪ್‌ನಲ್ಲಿ ಅಗ್ನಿ ಅವಘಡ ಸಂಭವಿಸಿ ಇಬ್ಬರು ನಾಗರಿಕರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಸಾಂಬಾದ ಪರಶೋತ್ತಮ್ (55) ಹಾಗೂ ಕಥುವಾದ ಸೋಮ್ ರಾಜ್ (45) ಮೃತರು.
ಇವರಿಬ್ಬರು ಅರ್ನೋಡಾ ಘಾಟ್‌ನ ಸೇನಾ ಕ್ಯಾಂಪ್‌ನಲ್ಲಿ ಟೈಲರಿಂಗ್ ಅಂಗಡಿ ಇಟ್ಟುಕೊಂಡಿದ್ದರು. ಸೀಮೆ ಎಣ್ಣೆ ಹೀಟರ್‌ನಲ್ಲಿ (ಚಳಿಗೆ ರಕ್ಷಣೆ ಪಡೆಯುವ ಸಾಧನ) ಸಮಸ್ಯೆ ಉಂಟಾಗಿ ಬೆಂಕಿ ಅವಘಡ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳದಿಂದ ಸುಟ್ಟು ಕರಕಲಾದ ಎರಡು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಅವುಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.