ನವದೆಹಲಿ: ‘ಆರ್ಥಿಕ ದುರ್ನಡತೆ’ ಆರೋಪದ ಮೇಲೆ ಕೋಲ್ಕೊತಾದ ಆರ್‌ಜಿ ಕಾರ್ ಆಸ್ಪತ್ರೆಯ ಮಾಜಿ ಪ್ರಿನ್ಸಿಪಾಲ್ ಸಂದೀಪ್ ಘೋಷ್ ಅವರನ್ನು ಕೇಂದ್ರ ತನಿಖಾ ದಳ (CBI) ಸೋಮವಾರ ಬಂಧಿಸಿದೆ. ಘೋಷ್ ಅವರ ಅಧಿಕಾರಾವಧಿಯಲ್ಲಿ ಆಸ್ಪತ್ರೆಯಲ್ಲಿ ನಡೆದಿದೆ ಎನ್ನಲಾದ ಹಣಕಾಸು ಅಕ್ರಮಗಳ ತನಿಖೆಗೆ ಸಂಬಂಧಿಸಿದಂತೆ ಎಫ್‌ಐಆರ್‌ನಲ್ಲಿ ಘೋಷ್ ಅವರ ಹೆಸರು ದಾಖಲಾಗಿತ್ತು.ಅದಾಗಿ ಕೆಲವು ದಿನಗಳ ನಂತರ ಈ ಬಂಧನ ನಡೆದಿದೆ.
ಆಗಸ್ಟ್ 9 ರಂದು ಆರ್‌ಜಿ ಕಾರ್ ಆಸ್ಪತ್ರೆಯ ಸ್ನಾತಕೋತ್ತರ ತರಬೇತಿ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ಘೋಷ್ ಅವರನ್ನು ಸಿಬಿಐನ ಸಾಲ್ಟ್ ಲೇಕ್ ಕಚೇರಿಯಲ್ಲಿ 15 ನೇ ದಿನವೂ ಪ್ರಶ್ನಿಸಲಾಗಿತ್ತು. ನಂತರ ಸಿಬಿಐನ ಭ್ರಷ್ಟಾಚಾರ ವಿರೋಧಿ ವಿಭಾಗವನ್ನು ಹೊಂದಿರುವ ಕೋಲ್ಕತ್ತಾದ ನಿಜಾಮ್ ಪ್ಯಾಲೇಸ್ ಕಚೇರಿಗೆ ಕರೆದೊಯ್ದು ಅವರನ್ನು ಬಂಧಿಸಲಾಗಿದೆ ಎಂದು ಪ್ರಕಟಿಸಿದೆ.
ಕಲ್ಕತ್ತಾ ಹೈಕೋರ್ಟ್ ನಿರ್ದೇಶನದ ಮೇರೆಗೆ ದಾಖಲಾದ ಎಫ್ಐಆರ್‌ನಲ್ಲಿ , ತನಿಖಾ ಸಂಸ್ಥೆ ಘೋಷ್ ಮತ್ತು ಕೋಲ್ಕತ್ತಾ ಮೂಲದ ಮೂರು ಖಾಸಗಿ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಿದೆ.
ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಬಿಐ ಆಗಸ್ಟ್ 25 ರಂದು ಘೋಷ್ ಅವರ ಕೋಲ್ಕತ್ತಾದ ಬೆಲಿಯಾಘಾಟಾ ನಿವಾಸದಲ್ಲಿ ಒಂದು ದಿನದ ಶೋಧ ಕಾರ್ಯಾಚರಣೆ ನಡೆಸಿತ್ತು. ಆಗಸ್ಟ್ 9 ರಂದು ಮುಂಜಾನೆ ಸರ್ಕಾರಿ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ 31 ವರ್ಷದ ಸ್ನಾತಕೋತ್ತರ ತರಬೇತಿ ವೈದ್ಯರ ಅತ್ಯಾಚಾರ ಮತ್ತು ಕೊಲೆಯ ಬಗ್ಗೆಯೂ ಸಂಸ್ಥೆ ತನಿಖೆ ನಡೆಸುತ್ತಿದೆ.
ಈ ಸುದ್ದಿಯನ್ನೂ ಓದಿ: Mangalore News: ಮಂಗಳೂರು ಆಯುಷ್ ಆಸ್ಪತ್ರೆಗೆ ಉಪಕರಣ ಖರೀದಿ ಅಕ್ರಮ; ತನಿಖೆಗೆ ಆದೇಶಿಸಿದ ಸಚಿವ ದಿನೇಶ್ ಗುಂಡೂರಾವ್
ಆರ್ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲರು ಮತ್ತು ಇತರರ ಅಧಿಕಾರಾವಧಿಯಲ್ಲಿ ನಡೆದ ಹಣಕಾಸು ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಜಾರಿ ನಿರ್ದೇಶನಾಲಯವು ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣ ದಾಖಲಿಸಿದೆ ಎಂದು ಪಿಟಿಐ ವರದಿ ಮಾಡಿದೆ. ಇತ್ತೀಚೆಗೆ ಭಾರತೀಯ ವೈದ್ಯಕೀಯ ಸಂಘ ಸಂದೀಪ್ ಘೋಷ್ ಅವರ ಸದಸ್ಯತ್ವವನ್ನು ಅಮಾನತುಗೊಳಿಸಿತ್ತು.