Sunday, 15th December 2024

ನಾಲ್ಕು ರಾಜ್ಯಗಳ 45 ಸ್ಥಳಗಳಲ್ಲಿ ಸಿಬಿಐ ದಾಳಿ

ನವದೆಹಲಿ: ಅಕ್ರಮ ಗಣಿಗಾರಿಕೆ ಮತ್ತು ಸರ್ಕಾರಿ ಸ್ವಾಮ್ಯದ ಈಸ್ಟರ್ನ್ ಕೋಲ್ ಫೀಲ್ಡ್ ಲಿಮಿಟೆಡ್‌ನಿಂದ ಕಲ್ಲಿದ್ದಲು ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿ, ನಾಲ್ಕು ರಾಜ್ಯಗಳ 45 ಸ್ಥಳಗಳ ಮೇಲೆ ಸಿಬಿಐ ಶನಿವಾರ ಏಕಕಾಲದಲ್ಲಿ ದಾಳಿ ನಡೆಸಿದೆ.

ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ಗಳಲ್ಲಿ ಇಸಿಎಲ್ ಕಾರ್ಯನಿರ್ವಹಿಸುತ್ತದೆ. ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ಕೂಡ ಸಿಬಿಐ ದಾಳಿ ನಡೆಸಿದೆ. ಇಸಿಎಲ್‌ನ ಇಬ್ಬರು ಪ್ರಧಾನ ವ್ಯವಸ್ಥಾಪಕರು, ಇಬ್ಬರು ಇತರೆ ಅಧಿಕಾರಿಗಳು ಮತ್ತು ಮುಖ್ಯ ಭದ್ರತಾ ಅಧಿಕಾರಿ ಹಾಗೂ ಖಾಸಗಿ ವ್ಯಕ್ತಿ ಅನೂಪ್ ಮಾಝಿ ಹೆಸರನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಅನೂಪ್ ಮಾಝಿ ಪಶ್ಚಿಮ ಬಂಗಾಳದಲ್ಲಿ ಮುಖ್ಯವಾಗಿ ನಡೆಯುವ ಅಕ್ರಮ ಕಾರ್ಯಾಚರಣೆಗಳ ಪ್ರಮುಖ ಕಿಂಗ್ ಪಿನ್. ಅನೂಪ್ ಮನೆ ಮತ್ತು ಕಚೇರಿಗಳ ಮೇಲೆ ವ್ಯಾಪಕ ಪರಿಶೀಲನೆ ನಡೆಸಲಾಗಿದ್ದು, ಸಹವರ್ತಿಗಳ ಮನೆ ಮೇಲೂ ದಾಳಿ ನಡೆದಿದೆ.

ಲಾಲಾ ಎಂದು ಗುರುತಿಸಿಕೊಳ್ಳುತ್ತಿದ್ದ ಮಾಝಿ, ಬಂಗಾಳ-ಜಾರ್ಖಂಡ್ ಗಡಿಯಲ್ಲಿ ಅಕ್ರಮವಾಗಿ ಕಲ್ಲಿದ್ದಲು ಗಣಿಗಾರಿಕೆ ನಡೆಸು ತ್ತಿದ್ದ ಎಂದು ಆರೋಪಿಸಲಾಗಿದೆ.

ಆದಾಯ ತೆರಿಗೆ ಇಲಾಖೆ ಕೂಡ ತನಿಖೆ ಮಾಡುತ್ತಿದ್ದು, ಈ ತಿಂಗಳ ಆರಂಭದಲ್ಲಿ ನೋಟಿಸ್ ನೀಡಿತ್ತು. ಅಮಿತ್ ಶಾ ಅವರ ಎರಡು ದಿನ ಕೋಲ್ಕತಾ ಭೇಟಿ ಸಮಯದಲ್ಲಿಯೇ ಈ ನೋಟಿಸ್ ನೀಡಲಾಗಿತ್ತು.