Thursday, 12th December 2024

ತನಿಖಾ ಸಂಸ್ಥೆಗಳು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿವೆ: ಅಮಿತ್ ಶಾ

ವದೆಹಲಿ: ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಂತಹ ತನಿಖಾ ಸಂಸ್ಥೆಗಳು ನಿಷ್ಪಕ್ಷಪಾತ ವಾಗಿ ಕಾರ್ಯನಿರ್ವಹಿಸುತ್ತಿವೆ. ಉಳಿದ ಎಲ್ಲಾ ಪ್ರಕರಣಗಳು ಯುಪಿಎ ಸರ್ಕಾರದ ಅವಧಿಯಲ್ಲಿ ದಾಖಲಾಗಿರುವ ಪ್ರಕರಣಗಳಾಗಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಪಾದಿಸಿ ದ್ದಾರೆ.

ದೆಹಲಿಯಲ್ಲಿ ನಡೆದ ಕಾನ್‍ಕ್ಲೇವ್‍ನಲ್ಲಿ ಭಾಗವಹಿಸಿ ಮಾತನಾಡಿದ ಅಮಿತ್ ಶಾ, ತನಿಖಾ ಸಂಸ್ಥೆಗಳು ಏನೇ ಮಾಡಿದರೂ ಅದನ್ನು ನ್ಯಾಯಾಲಯ ದಲ್ಲಿ ಪ್ರಶ್ನಿಸಬಹುದು ಅದನ್ನು ಬಿಟ್ಟು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಲು ಮುಂದಾಗಬಾರದು ಎಂದು ಕಿವಿಮಾತು ಹೇಳಿದ್ದಾರೆ. ಸಿಬಿಐ ಮತ್ತು ಇಡಿ ತನಿಖಾ ಸಂಸ್ಥೆಗಳು ನ್ಯಾಯಾಲಯಕ್ಕಿಂತ ಮೇಲಲ್ಲ ಮತ್ತು ಯಾವುದೇ ನೋಟಿಸ್, ಎಫ್‍ಐಆರ್ ಮತ್ತು ಚಾರ್ಜ್ ಶೀಟ್‍ಗಳನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸಬಹುದು ಎಂದು ಗೃಹ ಸಚಿವರು ಹೇಳಿದರು.

ನ್ಯಾಯಾಲಯಕ್ಕೆ ಹೋಗುವ ಬದಲು ಹೊರಗೆ ಯಾಕೆ ಕೂಗಾಡುತ್ತಿದ್ದಾರೆ? ಯಾರ ಮೇಲಾದರೂ ಭ್ರಷ್ಟಾಚಾರದ ಆರೋಪವಿದ್ದರೆ ತನಿಖೆ ಯಾಗಬೇಕಲ್ಲವೇ ಎಂದು ಜನತೆಯನ್ನು ಕೇಳಬೇಕೆಂದಿದ್ದೇನೆ. ತನಿಖಾ ಸಂಸ್ಥೆಗಳಲ್ಲಿ ದಾಖಲಾಗಿರುವ ಎರಡು ಪ್ರಕರಣಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ಪ್ರಕರಣಗಳು ಯುಪಿಎ ಆಡಳಿತಾವಧಿಯಲ್ಲಿ ದಾಖಲಾಗಿವೆ. ನಮ್ಮ ಸರ್ಕಾರದ ಅವಧಿಯಲ್ಲಿ ಅಲ್ಲ ಎಂದಿದ್ದಾರೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತದ 10 ವರ್ಷಗಳ ಅವಧಿಯಲ್ಲಿ 12 ಲಕ್ಷ ಕೋಟಿ ಮೊತ್ತದ ಹಗರಣಗಳ ಬಗ್ಗೆ ಆರೋಪಗಳು ಬಂದಾಗ, ಪರಿಸ್ಥಿತಿಯನ್ನು ಶಾಂತವಾಗಿರಿಸಲು ಸರ್ಕಾರ ಸಿಬಿಐ ಮೂಲಕ ಪ್ರಕರಣವನ್ನು ದಾಖಲಿಸಿದೆ ಎಂದು ಶಾ ಹೇಳಿದರು. ಅಕ್ರಮ ಹಣ ವರ್ಗಾವಣೆ ಪ್ರಕರಣವಿದ್ದರೆ ಇಡಿ ತನಿಖೆ ನಡೆಸಲಿದೆ ಎಂದರು.