Thursday, 19th September 2024

ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ನಿಧನ

ನವದೆಹಲಿ : ಕೇಂದ್ರ ಆಹಾರ ಮತ್ತು ನಾಗರಿಕ ಸಚಿವ ರಾಮ್ ವಿಲಾಸ್ ಪಾಸ್ವಾನ್ ( 74) ನಿಧನ ರಾಗಿದ್ದಾರೆ. ರಾಮ ವಿಲಾಸ್ ಪಾಸ್ವಾನ್ ಮಗ ಚಿರಾಗ್ ಪಾಸ್ವಾನ್ ತಮ್ಮ ತಂದೆ ಸಾವಿನ ಕುರಿತು ಟ್ವೀಟ್ ಮೂಲಕ ಧೃಡಪಡಿಸಿದ್ದಾರೆ.

ಅವರ ನಿಧನಕ್ಕೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ , ಉಪರಾಷ್ಡ್ರಪತಿ, ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಕಂಬನಿ ಮಿಡಿದಿದ್ದಾರೆ.

ಎನ್‌ಡಿಎ ಸರ್ಕಾರದಲ್ಲಿ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ಪೂರೈಕೆ ಖಾತೆ ಸಚಿವರಾಗಿರುವ ರಾಮ್ ವಿಲಾಸ್ ಪಾಸ್ವಾನ್ ಬಿಹಾರದವರು. ಅವರು ಎನ್‌ಡಿಎ ಸರ್ಕಾರದ ಜೊತೆ ಕೈಜೋಡಿಸಿರುವ ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷರೂ ಹೌದು.

ಶ್ವಾಸಕೋಶ ಮತ್ತು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ರಾಮ್ ವಿಲಾಸ್ ಪಾಸ್ವಾನ್ ಅವರು ಭಾನುವಾರ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು.

ನಾಲ್ಕು ದಿನಗಳ ಹಿಂದೆ ಒಮ್ಮೆಲೇ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾದ ಕಾರಣ, ತಡರಾತ್ರಿ ತುರ್ತಾಗಿ ಹೃದಯ ಶಸ್ತ್ರಚಿಕಿತ್ಸೆ ಮಾಡಬೇಕಾಯಿತು. ಸಚಿವ ಪಾಸ್ವಾನ್ ಅವರಿಗೆ ಈ ಮೊದಲೇ ಹೃದಯ ಸಂಬಂಧಿ ತೊಂದರೆಗಳು ಕಾಣಿಸಿಕೊಂಡಿದ್ದವು.

ರಾಮ್ ವಿಲಾಸ್ ಪಾಸ್ವಾನ್ ಅವರು ಕಳೆದ 32 ವರ್ಷಗಳಲ್ಲಿ ಹನ್ನೊಂದು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ಅದರಲ್ಲಿ ಒಂಬತ್ತು ಬಾರಿ ಜಯಿಸಿದ್ದು, ಆರು ಪ್ರಧಾನಿಗಳ ಜೊತೆಗೆ ಕೆಲಸ ಮಾಡಿದ್ದಾರೆ. ಈ ಹಿಂದೆ ಮಾಜಿ ಪ್ರಧಾನಿ ದಿ.ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಅವರು, 2004ರಲ್ಲಿ ಅಧಿಕಾರಕ್ಕೆ ಬಂದ ಯುಪಿಎ ಸರ್ಕಾರದ ಅವಧಿ ಯಲ್ಲಿಯೂ ಸಚಿವರಾಗಿದ್ದರು.

ಸಂಯುಕ್ತ ಸೋಷಿಯಲಿಸ್ಟ್ ಪಕ್ಷದ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ ಪಾಸ್ವಾನ್, 1969ರಲ್ಲಿ ಬಿಹಾರ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾಗಿದರು.

ಎಂಟು ಬಾರಿ ಸಂಸತ್ ಸದಸ್ಯ :
1977, 1980, 1989, 1996, 1999, 2004 ಮತ್ತು 2014ರಲ್ಲಿ ಅವರು ಲೋಕಸಭೆಗೆ ಚುನಾಯಿತರಾಗಿದ್ದರು. ಎಂಟು ಬಾರಿ ಲೋಕಸಭೆ ಸದಸ್ಯರಾಗಿ ಮತ್ತು ರಾಜ್ಯಸಭೆ ಸದಸ್ಯರಾಗಿ ಅವರು ರಾಷ್ಟ್ರ ರಾಜಕಾರಣದಲ್ಲಿ ಅಪಾರ ಅನುಭವ ಹೊಂದಿದ್ದಾರೆ.

1996-98ರ ಅವಧಿಯಲ್ಲಿನ ನ್ಯಾಷನಲ್ ಫ್ರಂಟ್ ಸರ್ಕಾರದ ಅವಧಿಯಲ್ಲಿ ರೈಲ್ವೆ ಸಚಿವರಾಗಿದ್ದರು. ವಾಜಪೇಯಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಾಗ 1999-2001ರ ಅವಧಿಯಲ್ಲಿ ಸಂವಹನ ಸಚಿವರಾಗಿ ಮತ್ತು 2001-02ರಲ್ಲಿ ಕಲ್ಲಿದ್ದಲು ಹಾಗೂ ಗಣಿ ಖಾತೆ ಸಚಿವರಾಗಿದ್ದರು.

1946ರಲ್ಲಿ ಬಿಹಾರದ ದಲಿತ ಕುಟುಂಬದಲ್ಲಿ ಜನಿಸಿದ ಪಾಸ್ವಾನ್, ಪಟ್ನಾ ವಿಶ್ವವಿದ್ಯಾಲಯದಲ್ಲಿ ಕಾನೂನು ಮತ್ತು ಕಲಾ ಪದವಿ ಪಡೆದುಕೊಂಡರು.

Leave a Reply

Your email address will not be published. Required fields are marked *