ಬೆಂಗಳೂರು: ನರೇಂದ್ರ ಮೋದಿ ಸರ್ಕಾರ ಗುರುವಾರ ‘ಹಿಜ್ಬ್-ಉತ್-ತಹ್ರಿರ್’ (HuT) ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. ಭಯೋತ್ಪಾದನೆ ಬಗ್ಗೆ ಶೂನ್ಯ ಸಹಿಷ್ಣುತೆ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ನೀತಿಯನ್ನು ಅನುಸರಿಸಿ, ಗೃಹ ಸಚಿವಾಲಯವು ಇಂದು ‘ಹಿಜ್ಬ್-ಉತ್-ತಹ್ರಿರ್’ ಅನ್ನು ‘ಭಯೋತ್ಪಾದಕ ಸಂಘಟನೆ’ ಎಂದು ಘೋಷಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah ) ಎಕ್ಸ್‌ನಲ್ಲಿ ಪ್ರಕಟಿಸಿದ್ದಾರೆ.
ಈ ಸಂಘಟನೆಯು ಯುವಕರನ್ನು ಭಯೋತ್ಪಾದಕ ಸಂಘಟನೆಗಳಿಗೆ ಸೇರಲು ಮತ್ತು ತೀವ್ರಗಾಮಿಗಳನ್ನಾಗಿ ಮಾಡಲು ಮತ್ತು ಭಯೋತ್ಪಾದಕ ಚಟುವಟಿಕೆಗಳಿಗಾಗಿ ಹಣ ನ್ನು ಸಂಗ್ರಹಿಸುವುದು, ರಾಷ್ಟ್ರೀಯ ಭದ್ರತೆ ಮತ್ತು ಭಾರತದ ಸಾರ್ವಭೌಮತ್ವಕ್ಕೆ ಗಂಭೀರ ಬೆದರಿಕೆ ಉಂಟು ಮಾಡುತ್ತಿದೆ. ಅದೇ ರೀತಿ ವಿವಿಧ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದೆ. ಭಯೋತ್ಪಾದನೆಯ ಶಕ್ತಿಗಳನ್ನು ಎದುರಿಸುವ ಮೂಲಕ ಭಾರತವನ್ನು ಭದ್ರಪಡಿಸಲು ಮೋದಿ ಸರ್ಕಾರ ಬದ್ಧವಾಗಿದೆ ಎಂದು ಅಮಿತ್ ಶಾ ಅವರು ಹೇಳಿದ್ದಾರೆ.
ಗೆಜೆಟ್ ಅಧಿಸೂಚನೆಯಲ್ಲಿ, ಗೃಹ ಸಚಿವಾಲಯ (ಎಂಎಚ್ಎ) ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಮತ್ತು ಮೊಬೈಲ್ ಅಪ್ಲಿಕೇಷನ್ ಮೂಲಕ ಮತ್ತು ಯುವಕರನ್ನು ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಲು ಉತ್ತೇಜಿಸುತ್ತಿದೆ ಎಂದು ಆರೋಪಿಸಲಾಗಿದೆ.
ಎಚ್‌ಯುಟಿ ಉಗ್ರಗಾಮಿ ಸಂಘಟನೆಯಾಗಿದ್ದು, ಜಿಹಾದ್ ಮತ್ತು ಭಯೋತ್ಪಾದಕ ಚಟುವಟಿಕೆಗಳ ಮೂಲಕ ಪ್ರಜಾಸತ್ತಾತ್ಮಕ ಸರ್ಕಾರಗಳನ್ನು ಉರುಳಿಸಿ ಜಾಗತಿಕವಾಗಿ ಇಸ್ಲಾಮಿಕ್ ಸ್ಟೇಟ್ ಸ್ಥಾಪಿಸುವ ಗುರಿ ಹೊಂದಿದೆ. ಇದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಆಂತರಿಕ ಭದ್ರತೆಗೆ ಗಂಭೀರ ಬೆದರಿಕೆ ಎಂದು ಗೃಹ ಸಚಿವಾಲಯ ಹೇಳಿದೆ.
ಪುದುಚೇರಿಯಲ್ಲಿ ಭಾರತ ವಿರೋಧಿ ಸಂಘಟನೆಯ ಸಿದ್ಧಾಂತವನ್ನು ಉತ್ತೇಜಿಸುವ ಮೂಲಕ ಅಸಮಾಧಾನ ಮತ್ತು ಪ್ರತ್ಯೇಕತಾವಾದ ಹರಡಲು ಸಂಬಂಧಿಸಿದ ತಮಿಳುನಾಡು ಹಿಜ್ಬ್-ಉತ್-ತಹ್ರಿರ್ (ಎಚ್ಯುಟಿ) ಪ್ರಕರಣದ ಪ್ರಮುಖ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬುಧವಾರ ಬಂಧಿಸಿತ್ತು.
ಹಿಜ್ಬ್-ಉತ್-ತಹ್ರಿರ್ ಎಂದರೇನು?
1953 ರಲ್ಲಿ ಜೆರುಸಲೇಂನಲ್ಲಿ ಸ್ಥಾಪನೆಯಾದ ಹಿಜ್ಬ್-ಉತ್-ತಹ್ರಿರ್ ಜಾಗತಿಕ ಪ್ಯಾನ್-ಇಸ್ಲಾಮಿಕ್ ಗುಂಪು. ಗ್ರೂಪ್‌ನ ಪ್ರಧಾನ ಕಚೇರಿ ಲೆಬನಾನ್‌ನಲ್ಲಿ ಮತ್ತು ಇದು ಯುನೈಟೆಡ್ ಕಿಂಗ್ಡಮ್, ಯುನೈಟೆಡ್ ಸ್ಟೇಟ್ಸ್, ಕೆನಡಾ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಕನಿಷ್ಠ 30ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇಸ್ರೇಲ್ ಮತ್ತು ಯಹೂದಿಗಳ ವಿರುದ್ಧದ ದಾಳಿ ನಡೆಸುವ ಉದ್ದೇಶ ಹೊಂದಿದೆ.
ಇದನ್ನೂ ಓದಿ: Ratan Tata Passed Away : ಸರ್ಕಾರಿ ಗೌರವಗಳೊಂದಿಗೆ ರತನ್ ಟಾಟಾ ಅಂತ್ಯಸಂಸ್ಕಾರ
ಹಲವಾರು ದೇಶಗಳು ತಮ್ಮ ವಿಧ್ವಂಸಕ ಚಟುವಟಿಕೆಗಳಿಗಾಗಿ ಎಚ್‌ಯುಟಿಯನ್ನು ನಿಷೇಧಿಸಿವೆ. ಜರ್ಮನಿ, ಈಜಿಪ್ಟ್, ಯುಕೆ ಮತ್ತು ಹಲವಾರು ಮಧ್ಯ ಏಷ್ಯಾ ಮತ್ತು ಅರಬ್ ದೇಶಗಳು ಈಗಾಗಲೇ ಈ ಗುಂಪನ್ನು ನಿಷೇಧಿಸಿವೆ.